ಒಲಿಂಪಿಕ್ಸ್: ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾಗೆ ಐತಿಹಾಸಿಕ ಚಿನ್ನದ ಪದಕ

ಟೋಕಿಯೊ: ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಒಲಿಂಪಿಕ್ಸ್ ನಲ್ಲಿ ಶನಿವಾರ ನಡೆದ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್ ನಲ್ಲಿ ಅತ್ಯಮೋಘ ಪ್ರದರ್ಶನ ನೀಡಿ ಚಿನ್ನದ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದಾರೆ.
ನೀರಜ್ ಚೋಪ್ರಾ ಅವರು ಶೂಟರ್ ಅಭಿನವ್ ಬಿಂದ್ರಾ (2008) ನಂತರ ವೈಯಕ್ತಿಕ ವಿಭಾಗದಲ್ಲಿ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡ ಎರಡನೇ ಭಾರತೀಯನೆಂಬ ಹೆಗ್ಗಳಿಕೆಗೆ ಪಾತ್ರರಾದರು.
ಚೋಪ್ರಾ ತನ್ನ ಎರಡನೇ ಪ್ರಯತ್ನದಲ್ಲಿ 87.58 ಮೀ.ದೂರಕ್ಕೆ ಜಾವೆಲಿನ್ ಎಸೆದಿದ್ದು, ಇದು ಫೈನಲ್ ನಲ್ಲಿ ಅವರ ಶ್ರೇಷ್ಠ ಪ್ರದರ್ಶನವಾಗಿತ್ತು. ಈ ಪ್ರದರ್ಶನವೇ ಅವರಿಗೆ ಚಿನ್ನದ ಪದಕ ತಂದುಕೊಟ್ಟಿತು.
ಹರ್ಯಾಣದ ಪಾಣಿಪತ್ ಸಮೀಪದ ಖಂಡ್ರಾ ಗ್ರಾಮದ 23 ವರ್ಷದ ರೈತನ ಮಗ ಅಥ್ಲೆಟಿಕ್ಸ್ ಜಗತ್ತನ್ನು ಅಚ್ಚರಿಗೆ ಕೆಡವಿದರು. ಒಲಿಂಪಿಕ್ಸ್‌ನ ಟ್ರ್ಯಾಕ್ ಮತ್ತು ಫೀಲ್ಡ್ ನಲ್ಲಿ ಪದಕ ಗಳಿಸಲು 100 ವರ್ಷಗಳ ಭಾರತದ ಕಾಯುವಿಕೆಗೆ ಚೋಪ್ರಾ ಕೊನೆ ಹಾಡಿದರು.
1920 ರಲ್ಲಿ ಬೆಲ್ಜಿಯಂನ ಆ್ಯಂಟ್ ವರ್ಪ್ ನಲ್ಲಿ ನಡೆದ ಕ್ರೀಡಾಕೂಟದಲ್ಲಿ ದೇಶವು ಭಾಗವಹಿಸಲು ಆರಂಭಿಸಿದ ನಂತರ ಯಾವುದೇ ಭಾರತೀಯ ಕ್ರೀಡಾಪಟು ಅತ್ಲೆಟಿಕ್ಸ್ ನಲ್ಲಿ ಪದಕ ಗೆದ್ದಿಲ್ಲ.
ಮೊದಲ ಪ್ರಯತ್ನದಲ್ಲಿ 87.03 ಮೀ.ದೂರಕ್ಕೆ ಜಾವೆಲಿನ್ ಎಸೆದರು. ಎರಡನೇ ಪ್ರಯತ್ನದಲ್ಲಿ 87.58 ಮೀ.ದೂರಕ್ಕೆ ಜಾವೆಲಿನ್ ಎಸೆದು ಶ್ರೇಷ್ಠ ಪ್ರದರ್ಶನ ನೀಡಿದರು. ಈ ಮೂಲಕ ಅಗ್ರ ಸ್ಥಾನವನ್ನುಭದ್ರಪಡಿಸಿಕೊಂಡರು. ಮೂರನೇ ಪ್ರಯತ್ನದಲ್ಲಿ 76.79 ಮೀ.ದೂರಕ್ಕೆ ಎಸೆದರು. ನಾಲ್ಕನೇ ಹಾಗೂ ಐದನೇ ಪ್ರಯತ್ನದಲ್ಲಿ ಫೌಲ್ ಥ್ರೋ ಎಸೆದ ಚೋಪ್ರಾ ಅಗ್ರ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು.ಚೋಪ್ರಾ ಆರನೇ ಹಾಗೂ ಕೊನೆಯ ಸುತ್ತಿನಲ್ಲಿ 84.24 ಮೀ.ದೂರ ಜಾವೆಲಿನ್ ಎಸೆದರು.
ಗಣರಾಜ್ಯದ ಜಾಕಬ್ ವಾಡ್ಲೆಜ್ಚ್ (86.67 ಮೀ) ಬೆಳ್ಳಿ ಪದಕ ಜಯಿಸಿದರೆ ಹಾಗೂ ವೆಸೆಲಿ ವಿಟೆಜ್ಸ್ಲಾವ್ (85.44 ಮೀ.)ಕಂಚಿನ ಪದಕ ಜಯಿಸಿದರು.
ಚೋಪ್ರಾ ಅರ್ಹತಾ ಸುತ್ತಿನಲ್ಲಿ 86.65 ಮೀ.ದೂರಕ್ಕೆ ಜಾವೆಲಿನ್ ಎಸೆದು ಫೈನಲ್ ಗೆ ಪ್ರವೇಶಿಸುವ ಮೂಲಕ ಭಾರತಕ್ಕಾಗಿ ಅತ್ಲೆಟಿಕ್ಸ್ ನಲ್ಲಿ ಮೊದಲ ಬಾರಿ ಪದಕ ಗೆಲ್ಲುವ ಆಸೆಯನ್ನು ಮೂಡಿಸಿದರು.