ಬೆಂಗಳೂರು: ರೆಡ್ಡಿ ಸಮುದಾಯಕ್ಕೆ ಸಚಿವ ಸ್ಥಾನ ನೀಡಲು ಆಗ್ರಹಿಸಿ ಪ್ರತಿಭಟನೆ

ಬೆಂಗಳೂರು, ಆ.7: ರೆಡ್ಡಿ ಸಮುದಾಯದ ಜನಸಂಖ್ಯೆಯನ್ನು ಪರಿಗಣಿಸಿ ಸಚಿವ ಸಂಪುಟದಲ್ಲಿ ರೆಡ್ಡಿ ಜನಾಂಗದ ಶಾಸಕರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ಜತೆಗೆ, ಪ್ರತ್ಯೇಕ ರೆಡ್ಡಿ ನಿಗಮ ಸ್ಥಾಪಿಸುವಂತೆ ಬೃಹತ್ ಪ್ರತಿಭಟನೆ ನಡೆಸಿದರು.
ಶನಿವಾರ ನಗರದಲ್ಲಿ ರಾಜ್ಯ ರೆಡ್ಡಿ ಜನ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಸಮುದಾಯದ ಮುಖಂಡರು, ನಮ್ಮ ಸಮುದಾಯದ 11 ಜನ ಶಾಸಕರು ಆಯ್ಕೆಯಾಗಿದ್ದಾರೆ. ಆದರೆ ರೆಡ್ಡಿ ಸಮುದಾಯಕ್ಕೆ ಸೇರಿದ ಕೇವಲ ಒಬ್ಬ ಶಾಸಕರನ್ನು ಮಂತ್ರಿಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹರಿಹರದ ವೇಮಾನಂದ ಸ್ವಾಮೀಜಿ, ಈ ಹಿಂದಿನ ಯಡಿಯೂರಪ್ಪ ಸರಕಾರದಲ್ಲೂ ನಮಗೆ ಪ್ರಾತಿನಿಧ್ಯ ನೀಡಿರಲಿಲ್ಲ. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರಕಾರದಲ್ಲೂ ಕೂಡಾ ಸೂಕ್ತ ಪ್ರಾತಿನಿಧ್ಯ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪಕ್ಷದ ಬೆಳವಣಿಗೆಯಲ್ಲಿಯೂ ರೆಡ್ಡಿ ಸಮುದಾಯದ ಕೊಡುಗೆ ಬಹಳಷ್ಟಿದೆ. ಈ ಎಲ್ಲ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸಮುದಾಯಕ್ಕೆ ಸೇರಿದ ಸತೀಶ್ ರೆಡ್ಡಿ, ವಿಶ್ವನಾಥ್ ರೆಡ್ಡಿ, ಸೋಮಶೇಖರ್ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದಕ್ಕೂ ಮುನ್ನ ಸಂಘದ ಅಧ್ಯಕ್ಷ ಎಸ್. ಜಯರಾಮ ರೆಡ್ಡಿ ಮಾತನಾಡಿ, ರೆಡ್ಡಿ ಸಮುದಾಯದವರಿಗೆ ಸೇರಿದ ಸಹಸ್ರಾರು ಎಕರೆ ಅತ್ಯಮೂಲ್ಯ ಜಮೀನು ಬೆಂಗಳೂರು ಅಭಿವೃದ್ಧಿಗಾಗಿ ನೀಡಿದ್ದೇವೆ. ಬೆಂಗಳೂರು ನಗರದ ಶ್ರೇಯೋಭಿವೃದ್ಧಿಗಾಗಿ ರೆಡ್ಡಿ ಸಮುದಾಯ ಮಾಡಿರುವ ತ್ಯಾಗವನ್ನು ಬಿಜೆಪಿ ಸರಕಾರ ಉಪೇಕ್ಷೆ ಮಾಡಿದೆ ಎಂದು ದೂರಿದರು.
ರಾಜ್ಯ ಸರಕಾರ ಈ ಕೂಡಲೇ ರೆಡ್ಡಿ ಅಭಿವೃದ್ಧಿ ನಿಗಮ ಸ್ಥಾಪಿಸುವ ಜತೆಗೆ ಬಾಕಿ ಉಳಿದಿರುವ ನಾಲ್ಕು ಸಚಿವ ಸ್ಥಾನಗಳಲ್ಲಿ ಹೆಚ್ಚಿನ ಅವಕಾಶಗಳನ್ನು ರೆಡ್ಡಿ ಜನಾಂಗಕ್ಕೆ ನೀಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ತಮ್ಮ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಮೇಯರ್ ಎಸ್.ಕೆ. ನಟರಾಜ್, ರೆಡ್ಡಿ ಜನಸಂಘದ ಉಪಾಧ್ಯಕ್ಷರಾದ ವೆಂಕಟಶಿವಾರೆಡ್ಡಿ ಸೇರಿದಂತೆ ಪ್ರಮುಖರಿದ್ದರು.







