ಮುಖ್ಯಮಂತ್ರಿ ಆದ ತಕ್ಷಣ ದೇವೇಗೌಡರ ಮನೆಗೆ ಏಕೆ ಹೋಗಿದ್ದರು?: ಬೊಮ್ಮಾಯಿ ವಿರುದ್ಧ ಶಾಸಕ ಪ್ರೀತಂ ಗೌಡ ಅಸಮಾಧಾನ
"ಹೊಂದಾಣಿಕೆಯ ರಾಜಕಾರಣ ನಾನು ಮಾಡಲ್ಲ ''

ಹಾಸನ: ಮುಖ್ಯಮಂತ್ರಿ ಆದ ತಕ್ಷಣ ದೇವಸ್ಥಾನಕ್ಕೆ ಇಲ್ಲವೇ ಮಠಕ್ಕೆ ಹೋಗುತ್ತಾರೆ ಆದರೇ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸದ 24 ಗಂಟೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ಏಕೆ ಹೋಗಿದ್ದರು ಎಂದು ಬಿಜೆಪಿ ಕಾರ್ಯಕರ್ತರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ಅಡ್ಜಸ್ಟ್ ಮೆಂಟ್ ರಾಜಕಾರಣವನ್ನು ನಾನು ಮಾಡುವುದಿಲ್ಲ ಎಂದು ಕ್ಷೇತ್ರದ ಶಾಸಕ ಪ್ರೀತಮ್ ಜೆ. ಗೌಡ ಪ್ರಶ್ನೆ ಮಾಡಿ ತಮ್ಮ ಅಸಮಧಾನವನ್ನು ಹೊರ ಹಾಕಿದರು.
ನಗರ ಎಂ.ಜಿ. ರಸ್ತೆ ಬಳಿ ಇರುವ ತಮ್ಮ ಬಿಜೆಪಿ ಕಛೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಬಿ.ಎಸ್. ಯಡಿಯೂರಪ್ಪನವರು ನನಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದರು ಕೂಡ ಅದನ್ನು ನಾನು ನಿರಾಕರಣೆ ಮಾಡಿದ್ದೇನು. ನೂರು ಮೀಟರ್ ಓಡಲಿಕ್ಕೆ ನಾನು ರಾಜಕೀಯಕ್ಕೆ ಬಂದಿರಲಿಲ್ಲ. ಮ್ಯಾರಥಾನ್ ಓಡಲು ಬಂದಿದ್ದೇನೆ. ನನ್ನನು ಮಂತ್ರಿ ಮಾಡಿ ಎಂದು ಯಾರ ಬಳಿ ಕೇಳಿರಲಿಲ್ಲ. ಮಂತ್ರಿ ಮಾಡಿಲ್ಲ ಅನ್ನೊದಕ್ಕಿಂತ ನಾನು ಕೇಳಿಲ್ಲ. ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಶಾಸಕರಿಗೆ ಮಂತ್ರಿ ಸ್ಥಾನ ಕೊಡಬೇಕಾಗಿತ್ತು. ಆದರೇ ಹಳೇ ಮೈಸೂರು ಭಾಗಕ್ಕೆ ಮಂತ್ರಿ ಸ್ಥಾನ ಕೊಟ್ಟಿಲ್ಲ ಅನ್ನೋ ನೋವು ಈ ಭಾಗದ ಬಿಜೆಪಿ ಕಾರ್ಯಕರ್ತರಿಗೆ ಇದೆ ಎಂದರು.
ನೂತನ ಮುಖ್ಯಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಸುತ್ತೂರು, ಸಿರಿಗೆರೆ, ಸಿದ್ದಗಂಗಾ ಆದಿಚುಂಚನಗಿರಿ, ಇತರೆ ಮಠಕ್ಕೆ ಹೋಗ್ತಾರೆ ಅಂದುಕೊಂಡಿದ್ವಿ. ಆದರೆ ದೇವೇಗೌಡರ ಮನೆಗೆ ಹೋಗಿರುವುದು ಬಿಜೆಪಿ ಕಾರ್ಯಕರ್ತರಿಗೆ ನೋವಾಗಿದೆ. ದಿನ ಬೆಳಿಗ್ಗೆ ಹಾಸನ ಜಿಲ್ಲೆಯಲ್ಲಿ ಗುದ್ದಾಟ ನಡೆಸುವವರು ನಾವುಗಳು. ಈಗ ನೋಡಿದರೇ ನಿಮ್ಮ ಮನೆಗೆ ಕಲ್ಲು ಹೊಡೆದವರ ಮನೆಗೆ ಹೋಗಿರುವುದು ಬೇಸರ ತಂದಿದೆ. ಕ್ಯಾಬಿನೆಟ್ ವಿಸ್ತರಣೆಗು ಮುನ್ನ ಹೋದರೆ ಹೇಗೆ ಎಂದು ಕಾರ್ಯಕರ್ತರು ನನ್ನ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು. ನಾನು
'ಕಾರ್ಯಕರ್ತರನ್ನು ಸಮಾಧಾನ ಮಾಡಿದ್ದೀನಿ. ನಾನೇನು ಮಂತ್ರಿ ಮಾಡಿ ಎಂದು ಕೇಳಿಲ್ಲ. ತಪ್ಪಿಸಿದರು ಎಂಬ ಪ್ರಶ್ನೆ ಬರಲ್ಲ. ಸಿಎಂ ಆದ 24 ಗಂಟೆಯೊಳಗೆ ದೇವೇಗೌಡರ ಮನೆಗೆ ಏಕೆ ಹೋಗಬೇಕಿತ್ತು ಎಂದು ಕಾರ್ಯಕರ್ತರು ನನ್ನನ್ನು ಪ್ರಶ್ನೆ ಮಾಡುತ್ತಿದ್ದಾರೆ ಎಂದರು. ನಾನು ಅಡ್ಜಸ್ಟ್ ಮೆಂಟ್ ರಾಜಕಾರಣವನ್ನು ಮಾಡುವುದಿಲ್ಲ. ದೇವೇಗೌಡರ ಮನೆಗೆ ಹೋಗಿರುವುದು ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ನಡೆಯಲಿದ್ದು, ಮುಖ್ಯಮಂತ್ರಿಗಳ ಇಂತಹ ನಡೆಯಿಂದ ಕೆಟ್ಟ ಪರಿಣಾಮ ಬೀರಲಿದೆ' ಎಂದು ಕಾರ್ಯಕರ್ತರು ನೊಂದು ಹೇಳುತ್ತಿದ್ದಾರೆ.
'ಮುಖ್ಯಮಂತ್ರಿಗಳೇ ನಮ್ಮ ಜೇಬಿನಲ್ಲಿ ಇದ್ದಾರೆ ಅಂಥಾ ಫಸ್ಟ್ ಫ್ಯಾಮಿಲಿ ಆಫ್ ಹಾಸನ್ ಅವರು ಸ್ಟೇಟ್ ಮೆಂಟ್ ಕೊಡ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ದೃಢಿಗೆಡಬೇಕಿಲ್ಲ, ನಾನು ನಿಮ್ಮ ಜೊತೆ ಇದ್ದೇನೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್. ಬೊಮ್ಮಾಯಿ ಸರ್ಕಾರ ಬೀಳಿಸಿದವರ ಮನೆಗೆ ಹೋಗಬಾರದಿತ್ತು ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಮ್ಮ ಜಿಲ್ಲೆಗೆ ಬರುವ ಯಾವುದೇ ಶಾಸಕರು ಹಾಗು ಮಂತ್ತಿಗಳು ಜೆಡಿಎಸ್ ಶಾಸಕರ ಮನೆಗೆ ಹೋಗಿ ಊಟ ಮಾಡಬಾರದು. ಇಂತಹ ನಡೆಯಿಂದ ಪಕ್ಷದ ಕಾರ್ಯಕರ್ತರಿಗೆ ನೋವಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ನೇರವಾಗಿ ಮಾತನಾಡ ಲಾಗುವುದು' ಎಂದು ಹೇಳಿದ್ದಾರೆ.
" ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡುತ್ತೇನೆ. ಬೇಕಾದರೇ ಕಾರ್ಯಕರ್ತರಿಗೆ ಹೇಳಲಿ ಅಡ್ಜಸ್ಟ್ ಮೆಂಟ್ ಮಾಡಿ ಎಂದು, ಆಗ ನಾನು ಅಡ್ಜಸ್ಟ್ ಮಾಡ್ಕೊಂತಿನಿ. ಮುಖ್ಯಮಂತ್ರಿಗಳು ಬ್ಯೂಸಿ ಇದ್ದು, ನಮಗೆ ಟೈಂ ಕೊಟ್ಟಿರುವುದಿಲ್ಲ" ಎಂದು ಹೇಳಿದರು.
ಹೊಳೆನರಸೀಪುರದ ನಾಯಕರು ಇಡೀ ಜಿಲ್ಲೆ ನಮ್ಮ ಜೇಬಿನಲ್ಲಿದೆ ಎಂದುಕೊಂಡು ಓಡಾಡುತ್ತಿದ್ದಾರೆ. ಕಳೆದ ಕ್ಯಾಬಿನೆಟ್ ನಲ್ಲಿ ಹತ್ತು ಜನ ಒಕ್ಕಲಿಗರು ಇದ್ದರು. ಈ ಕ್ಯಾಬಿನೆಟ್ ನಲ್ಲಿ ಒಬ್ಬ ಒಕ್ಕಲಿಗರಿಗೆ ಮಾತ್ರ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಬಿಜೆಪಿ ನಾಯಕರು ಮುಂದಿನ ಚುನಾವಣೆಯಲ್ಲಿ ಬಂದು ಜವಾಬ್ದಾರಿ ತೆಗೆದುಕೊಂಡು ಎಷ್ಟು ಸ್ಥಾನ ತಂದುಕೊಡುತ್ತಾರೆ ನೋಡೋಣ! ಮಂತ್ರಿಯಾಗಬೇಕೆಂದು ನನಗೆ ಆಸೆಯಿಲ್ಲ, ರಾಜಕೀಯ ಮಾಡಬೇಕೆಂಬ ಆಸೆಯಿದೆ ಎಂದು ತಮ್ಮ ನೋವನ್ನು ತೋಡಿಕೊಂಡರು.







