ಹಮಾಸ್ ಮೇಲೆ ಇಸ್ರೇಲ್ ವೈಮಾನಿಕ ದಾಳಿ

ರಮಲ್ಲಾ, ಆ.7: ಗಾಝಾ ಪಟ್ಟಿ ಪ್ರದೇಶದಿಂದ ಇಸ್ರೇಲ್ನತ್ತ ಬೆಂಕಿಹರಡಬಲ್ಲ 4 ಬಲೂನ್ಗಳನ್ನು ಹಾರಿ ಬಿಟ್ಟರುವ ಹಿನ್ನೆಲೆಯಲ್ಲಿ ಇಸ್ರೇಲ್ ನ ಯುದ್ಧ ವಿಮಾನಗಳು ಶನಿವಾರ ಬೆಳಿಗ್ಗೆ ಗಾಝಾಪಟ್ಟಿಯ 2 ನೆಲೆಗಳ ಮೇಲೆ ಬಾಂಬ್ ದಾಳಿ ನಡೆಸಿವೆ ಎಂದು ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ.
ಶುಕ್ರವಾರ ಗಾಝಾ ಪಟ್ಟಿ ಪ್ರದೇಶಕ್ಕೆ ಸಮೀಪವಿರುವ ಪ್ರದೇಶದಲ್ಲಿ ಬೆಂಕಿ ಹರಡಬಲ್ಲ 4 ಬಲೂನ್ ಗಳು ಬಿದ್ದ ಬಳಿಕ ಅಲ್ಲಿ ಬೆಂಕಿ ಹರಡಿ ಕೃಷಿ ಭೂಮಿಗೆ ವ್ಯಾಪಕ ಹಾನಿಯಾಗಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ನಡೆಸಿದ ವೈಮಾನಿಕ ಕಾರ್ಯಾಚರಣೆಯಲ್ಲಿ ಹಮಾಸ್ ಸೇನಾನೆಲೆಯ ಕಂಪೌಂಡ್ ಹಾಗೂ ಕ್ಷಿಪಣಿ ಉಡಾಯಿಸುವ ಕೇಂದ್ರಕ್ಕೆ ಹಾನಿಯಾಗಿದೆ ಎಂದು ಇಸ್ರೇಲ್ ಹೇಳಿದೆ. ಬಲೂನ್ ಗಳ ಉಡಾವಣೆ ಕ್ಷಿಪಣಿ ಉಡಾವಣೆಗೆ ಸಮ ಎಂದು ಇಸ್ರೇಲ್ ನ ನೂತನ ಪ್ರಧಾನಿ ನಫ್ತಾಲಿ ಬೆನ್ನೆಟ್ ಪ್ರತಿಕ್ರಿಯಿಸಿದ್ದಾರೆ.
ಸಾವು ನೋವಿನ ಬಗ್ಗೆ ಉಭಯ ಕಡೆಯವರಿಂದಲೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ಮಾಧ್ಯಮಗಳು ಹೇಳಿವೆ. ಇಸ್ರೇಲ್ ಹಾಗೂ ಈಜಿಪ್ಟ್ ಗಾಝಾ ಪಟ್ಟಿಯ ಮೇಲೆ ದಿಗ್ಬಂಧ ವಿಧಿಸಿವೆ. ಇದರನ್ವಯ ಈ ಪ್ರದೇಶದ ಕರಾವಳಿ ತೀರ ಮತ್ತು ಆಕಾಶ ವ್ಯಾಪ್ತಿ ಇಸ್ರೇಲ್ನ ನಿಯಂತ್ರಣದಲ್ಲಿರುತ್ತದೆ ಮತ್ತು ಈ ಪ್ರದೇಶಕ್ಕೆ ಜನರ ಸಂಚಾರ ಹಾಗೂ ಸರಕು ಸಾಗಣೆಯನ್ನು ನಿರ್ಬಂಧಿಸಲಾಗಿದೆ. ಹಮಾಸ್ ಮತ್ತಷ್ಟು ಶಸ್ತ್ರಾಸ್ತ್ರ ಕಲೆಹಾಕದಂತೆ ತಡೆಯಲು ಈ ದಿಗ್ಬಂಧನ ಅಗತ್ಯ ಎಂದು ಇಸ್ರೇಲ್ ಹೇಳುತ್ತಿದ್ದರೆ, ಇಂತಹ ಕ್ರಮಗಳು ಸಾಮೂಹಿಕ ಶಿಕ್ಷೆಗೆ ಸಮವಾಗಿದೆ ಎಂದು ವ್ಯಾಪಕ ಟೀಕೆಯೂ ವ್ಯಕ್ತವಾಗಿದೆ.







