ಒಲಿಂಪಿಕ್ಸ್ ನಲ್ಲಿ ದೇಶದ ಕ್ರೀಡಾಪಟುಗಳು ನೈಜ ದೇಶಪ್ರೇಮ ಮೆರೆಯುತ್ತಿದ್ದಾರೆ: ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮಿ

ಗದಗ, ಆ. 7: `ಪ್ರಸ್ತುತ ರಾಜಕಾರಣದಲ್ಲಿ, ಕಾವಿಯೊಳಗೆ ಖಾದಿಯ ಪ್ರವೇಶ ಸಲ್ಲದು. ಕಾವಿ ತ್ಯಾಗದ ಪ್ರತೀಕವಾಗಿದ್ದು, ಇಂತಹ ಬೆಳವಣಿಗೆಯಿಂದ ಸಾಮಾಜಿಕ ವ್ಯವಸ್ಥೆಯಲ್ಲಿ ಕಾವಿಯ ಪಾವಿತ್ರ್ಯತೆಗೆ ಧಕ್ಕೆ ಬರುತ್ತಿದೆ' ಎಂದು ಬೈಲೂರು ತೋಂಟದಾರ್ಯ ಮಠದ ಶ್ರೀ ನಿಜಗುಣಪ್ರಭು ತೊಂಟದಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಜಿಲ್ಲೆಯ ಮುಂಡರಗಿ ಪಟ್ಟಣದ ತೋಂಟದಾರ್ಯ ಶಾಖಾ ಮಠದಲ್ಲಿ ನಡೆದ ಆಷಾಢ ಮಾಸದ ಪ್ರವಚನದ ಸಾಂಕೇತಿಕ ಮಂಗಲ, ಪಾಲಕಿ ಮೆರವಣಿಗೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, `ಸಮಾಜದಲ್ಲಿ ಮಠಗಳು, ಸ್ವಾಮೀಜಿಗಳು ಶರಣ ಪರಂಪರೆಯಂತೆ ನಿಸ್ವಾರ್ಥ ಸೇವೆ ಮಾಡುವ ಮೂಲಕ ಸಾಮಾಜಿಕ ಬದ್ಧತೆ ಪ್ರದರ್ಶಿಸಬೇಕು. ಸಕಲರೂ ಒಂದೆಂಬ ಮನೋಭಾವನೆ ರೂಢಿಸಿಕೊಳ್ಳಬೇಕು. ಬುದ್ದ, ಬಸವರು ಈ ನಾಡಿಗೆ ದಯವೇ ಧರ್ಮದ ಮೂಲವೆಂದು ಸಾರಿದ್ದಾರೆ. ಇಂದಿನ ದಿನಮಾನಗಳಲ್ಲಿ ರಾಜಕಾರಣ ಮತ್ತು ಮಾಧ್ಯಮ ಕ್ಷೇತ್ರವು ಉದ್ಯಮವಾಗಿರುವದರಿಂದ ಸಾಮಾಜಿಕ ಬದ್ಧತೆ ಕಾಣುವದು ಅಪರೂಪವಾಗುತ್ತಿರುವದು ವಿಷಾದನೀಯವಾಗಿದೆ ಎಂದು ಹೇಳಿದರು.
ನೈಜ ದೇಶಪ್ರೇಮ: `ನಮ್ಮ ದೇಶದ ಕ್ರೀಡಾಪಟುಗಳು ಶ್ರಮಪಟ್ಟು ಕ್ರೀಡಾ ಮನೋಭಾವನೆಯಿಂದ ಒಲಿಪಿಂಕ್‍ನಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಅಲ್ಲಿ ಅವರು ನೈಜ ದೇಶಪ್ರೇಮ ಮೆರೆಯುತ್ತಿದ್ದಾರೆ. ಕ್ರೀಡೆ, ಕಲೆ, ಸಾಹಿತ್ಯ, ವಿಜ್ಞಾನ, ಸಂಗೀತ ಸಾಧನಗಳು ಜಾತೀಯತೆಯನ್ನು ನಿರ್ಮೂಲನೆ ಮಾಡುತ್ತವೆ. ಆದರೆ, ಕ್ರೀಡಾಕ್ಷೇತ್ರವು ಜಾತೀಯತೆಯ ಸಂಕುಚಿತ ರಾಜಕೀಯ ಭಾವದಿಂದ ಕಲುಷಿತಗೊಂಡು ಬಳಲುತ್ತಿದೆ' ಎಂದು ನಿಜಗುಣಪ್ರಭು ತೋಂಟದಾರ್ಯ ಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಿಪಿಐ ಸುನೀಲ್ ಸವದಿ, ಪುರಸಭೆ ಮುಖ್ಯಾಧಿಕಾರಿ ಫಕೀರಪ್ಪ ಇಂಗಳಗಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಎಲಿವಾಳ, ಸಾಹಿತಿ ಸಿ.ಎಸ್.ಅರಸನಾಳ, ದಾಸೋಹಿ ಪ್ರಭು ಅರಳಿ ಅವರನ್ನು ಸನ್ಮಾನಿಸಲಾಯಿತು. ಎಚ್.ವಿರುಪಾಕ್ಷಗೌಡ, ಶಿವಯೋಗಿ ಕೊಪ್ಪಳ, ಚೆನ್ನವೀರಸ್ವಾಮಿ ಹಿರೇಮಠ, ದೇವಪ್ಪ ರಾಮೇನಹಳ್ಳಿ, ಈಶ್ವಪ್ಪ ಬೆಟಗೇರಿ, ಕೊಟ್ರಗೌಡ ಪಾಟೀಲ ವಿ.ಎಸ್.ಘಟ್ಟಿ, ಪಾಲಾಕ್ಷಿ ಗಣದಿನ್ನಿ, ಉಮೇಶ ಹಿರೇಮಠ, ಸದಾಶಿವಯ್ಯ ಕಬ್ಬೂರಮಠ, ರವೀಂದ್ರ ಹೊನವಾಡ, ಶಂಕ್ರಣ್ಣ ಅಂಗಡಿ, ನಾಗರಾಜ ಹಿರೇಮಠ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು







