ತೆರಿಗೆ ಹೆಸರಲ್ಲಿ ಪಾಲಿಕೆ ಅಧಿಕಾರಿಗಳಿಂದ ಮೀಟರ್ ಬಡ್ಡಿ ದಂಧೆ: ರಾಮಲಿಂಗಾರೆಡ್ಡಿ ಆರೋಪ

ಬೆಂಗಳೂರು, ಆ. 7: `ಬೆಂಗಳೂರು ನಗರದಲ್ಲಿ 20 ಲಕ್ಷ ಆಸ್ತಿಗಳ ಪೈಕಿ 18 ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಬರುತ್ತವೆ. ಈ ಪೈಕಿ ಪಾಲಿಕೆ ತಮ್ಮ ಅಧಿಕಾರಿಗಳ ತಪ್ಪಿನಿಂದ ಆಗಿರುವ ಅಚಾತುರ್ಯಕ್ಕೆ 78 ಸಾವಿರ ಆಸ್ತಿಗಳ ಮಾಲಕರಿಗೆ ತೆರಿಗೆ ಪಾವತಿ ಮಾಡಿಲ್ಲ ಎಂದು ಎರಡರಿಂದ ಮೂರು ಪಟ್ಟು ದುಬಾರಿ ದಂಡ ವಿಧಿಸಿದೆ. ಈ ಆಸ್ತಿ ಮಾಲಕರಿಂದ 120 ಕೋಟಿ ರೂ.ತೆರಿಗೆ ಬಾಕಿ ಬರಬೇಕಾಗಿದ್ದು, ಅದಕ್ಕೆ 240ರೂ. ಕೋಟಿ ಬಡ್ಡಿ ಹಾಕಿದ್ದಾರೆ. ಆ ಮೂಲಕ ಪಾಲಿಕೆ ಅಧಿಕಾರಿಗಳು ತೆರಿಗೆ ಹೆಸರಿನಲ್ಲಿ ಮೀಟರ್ ಬಡ್ಡಿ ದಂಧೆ ನಡೆಸಲು ಮುಂದಾಗಿದ್ದಾರೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದಾರೆ.
ಶನಿವಾರ ಇಲ್ಲಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉಪಸ್ಥಿತಿಯಲ್ಲಿ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, `ಬಿಬಿಎಂಪಿ ಜನಸಾಮಾನ್ಯರ ಮೇಲೆ ಅವೈಜ್ಞಾನಿಕ ರೀತಿಯಲ್ಲಿ ತೆರಿಗೆ ಹಾಕುತ್ತಿದೆ. ಅಧಿಕಾರಿಗಳು ಐದು ವರ್ಷಗಳ ಹಿಂದೆ ವಲಯ ವಿಂಗಡಣೆಯನ್ನು ಸರಿಯಾಗಿ ಮಾಡದೆ, ಜನರಲ್ಲಿ ಗೊಂದಲ ಮೂಡಿಸಿದೆ. ಅಧಿಕಾರಿಗಳು ನಿಗದಿ ಮಾಡಿದ ವಲಯದಲ್ಲಿ ತೆರಿಗೆ ಪಾವತಿಸಿದ್ದಾರೆ. ಆದರೆ, ಈಗ ಅಧಿಕಾರಿಗಳು ನೀವು ಬೇರೆ ವಲಯಕ್ಕೆ ಅನ್ವಯವಾಗುವಂತೆ ತೆರಿಗೆ ಪಾವತಿ ಮಾಡುವಂತೆ ನೋಟಿಸ್ ಜಾರಿ ಮಾಡಿದ್ದಾರೆ' ಎಂದು ದೂರಿದರು.
`ಅಧಿಕಾರಿಗಳಿಗೆ ಆಡಳಿತ ವಿಚಾರದಲ್ಲಿ ಮೇಯರ್ ಅವರ ಅಧಿಕಾರವನ್ನು ನೀಡಿರಬಹುದು. ಆದರೆ, ತೆರಿಗೆ ಹೆಚ್ಚಳ ವಿಚಾರದಲ್ಲಿ ಇದು ಸಿಎಂ ಗಮನಕ್ಕೆ ಬರದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಈ ಹಿಂದೆ ಸಿಎಂ ಆಗಿದ್ದ ಯಡಿಯೂರಪ್ಪ ಅವರ ಗಮನಕ್ಕೆ ಈ ವಿಚಾರ ಬಂದಿರುತ್ತದೆ. ಹೀಗಾಗಿ ಈ ಮೀಟರ್ ಬಡ್ಡಿ ವ್ಯವಹಾರ ದಂಧೆಗೆ ಬಿಜೆಪಿ ಸರಕಾರವೇ ಕಾರಣವಾಗಿದೆ. ಪಾಲಿಕೆ ಮೊದಲು ಈ ಬಡ್ಡಿ ದಂಧೆಯನ್ನು ನಿಲ್ಲಿಸಬೇಕು' ಎಂದು ರಾಮಲಿಂಗಾರೆಡ್ಡಿ ಆಗ್ರಹಿಸಿದರು.
`ಪಾಲಿಕೆ ಅಧಿಕಾರಿಗಳು 2016ರಲ್ಲಿ ಸರಿಯಾಗಿ ವಲಯ ವರ್ಗಿಕರಣ ಮಾಡಿದ್ದರೆ ಜನರು ಅದೇ ವಲಯದಲ್ಲಿ ತೆರಿಗೆ ಕಟ್ಟುತ್ತಿದ್ದರು. ಆದರೆ, ಇಂದು ಯಾವುದೇ ತಪ್ಪು ಮಾಡದ ಜನರಿಗೆ ಈ ರೀತಿಯಾಗಿ ಮೂರು ಪಟ್ಟು ತೆರಿಗೆ ಕಟ್ಟುವಂತೆ ನೋಟಿಸ್ ಜಾರಿ ಮಾಡಿರುವುದು ಸರಿಯಲ್ಲ. ಕೂಡಲೇ ಈ ನಿರ್ಧಾರವನ್ನು ಅಧಿಕಾರಿಗಳು ಹಿಂಪಡೆಯಬೇಕು. ಈ ನಿರ್ಧಾರ ಹಿಂಪಡೆಯದಿದ್ದರೆ ಕಾಂಗ್ರೆಸ್ ಪಕ್ಷದಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ' ಎಂದು ಅವರು ಎಚ್ಚರಿಕೆ ನೀಡಿದರು.
`ಅಧಿಕಾರಿಗಳು ಈ ಹಿಂದೆ ಜಾರಿಯಲ್ಲಿದ್ದ ಕಾಯ್ದೆ ಆಧಾರವಾಗಿ ಜನರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಹಳೆ ಕಾಯ್ದೆಯಲ್ಲಿ ನೋಟಿಸ್ ಜಾರಿ ಮಾಡಲು ಕೇವಲ 3 ವರ್ಷಗಳ ಕಾಲಾವಕಾಶವಿದೆ. 3 ವರ್ಷಗಳ ಒಳಗಾಗಿ ಅವರು ನೋಟಿಸ್ ನೀಡಬೇಕಾಗಿತ್ತು. ಆದರೆ, ನೀಡಿಲ್ಲ. ನೂತನ ಕಾಯ್ದೆಯಲ್ಲಿ ಇದನ್ನು ಐದು ವರ್ಷಗಳಿಗೆ ವಿಸ್ತರಿಸಲಾಗಿದೆಯಾದರೂ, ಹಳೇಯ ಕಾಯ್ದೆ ಆಧಾರದ ಮೇಲೆ ನೋಟೀಸ್ ಅನ್ನು ನೀಡಲಾಗಿದೆ. ಪಾಲಿಕೆ ಅಧಿಕಾರಿಗಳ ಈ ನಿರ್ಧಾರ ಅಪರಾಧವಾಗಿದೆ' ಎಂದು ಅವರು ವಾಗ್ದಾಳಿ ನಡೆಸಿದರು.
`2017-18ನೆ ಸಾಲಿನಲ್ಲಿ ಯಾವುದೇ ದಂಡ ಅಥವಾ ಬಡ್ಡಿ ಇಲ್ಲದೆ ಮಾಲಕರು ಆಸ್ತಿ ತೆರಿಗೆ ಪಾವತಿ ಮಾಡಿರುತ್ತಾರೆ. ಆಸ್ತಿ ಮಾಲಕರು ತಮ್ಮ ವಲಯ ಗುರುತಿಸಲು ತೊಂದರೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳ ನೆರವನ್ನು ಪಡೆದು ಆಸ್ತಿ ತೆರಿಗೆ ಪಾವತಿ ಮಾಡಿರುತ್ತಾರೆ. ಈ ವೇಳೆ ಅಧಿಕಾರಿಗಳು ಮಾಡಿರುವ ತಪ್ಪಿನಿಂದಾಗಿ ತೆರಿಗೆ ಸಂಗ್ರಹದಲ್ಲಿ 120 ಕೋಟಿ ರೂ.ಗಳಷ್ಟು ವ್ಯತ್ಯಾಸ ಕಂಡು ಬಂದಿದೆ. ಐದು ವರ್ಷಗಳಲ್ಲಿ ತಂತ್ರಾಂಶವನ್ನು ಸರಿಪಡಿಸಿಕೊಳ್ಳದ ಪಾಲಿಕೆ ಅಧಿಕಾರಿಗಳು 2021ರಲ್ಲಿ ತಂತ್ರಾಂಶ ಸರಿಪಡಿಸಿಕೊಂಡು ಈಗ ಕಡಿಮೆ ಆಸ್ತಿ ತೆರಿಗೆ ಪಾವತಿ ಮಾಡಿದವರಿಗೆ ಬಾಕಿ ತೆರಿಗೆ ಪಾವತಿ ಮಾಡುವುದರ ಜತೆಗೆ ಈ ಅವಧಿಗೆ ಮೂರುಪಟ್ಟು ಬಡ್ಡಿಯನ್ನು ವಿಧಿಸಿರುವುದು ಖಂಡನೀಯ' ಎಂದು ರಾಮಲಿಂಗಾರೆಡ್ಡಿ ಕಿಡಿಕಾರಿದರು.
ಬದಲಾವಣೆ ಮಾಡಿ: `ಯಾವುದೇ ತೆರಿಗೆ ಸಂಬಂಧಿತ ವಿಚಾರದಲ್ಲಿ ತೀರ್ಮಾನ ಕೈಗೊಳ್ಳಬೇಕಾದರೆ ಆಗಿನ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ವಾಸ್ತವ ಅಂಶವನ್ನು ಗಮನದಲ್ಲಿಟ್ಟುಕೊಂಡು ಪಾಲಿಕೆಯಲ್ಲಿ ಕೇವಲ ಶೇ.10 ರಷ್ಟು ಮಾತ್ರ ಬದಲಾವಣೆಯನ್ನು ಮಾಡಬೇಕು ಎಂಬ ಕಾನೂನು ಇದೆ. ನಗರಾಭಿವೃದ್ಧಿ ಸಚಿವನಾಗಿ ನನಗೂ ಸ್ವಲ್ಪ ಈ ಬಗ್ಗೆ ಅರಿವಿದೆ. ಈ ಬಗ್ಗೆ ನಮ್ಮ ಪಕ್ಷದಿಂದ ಸಮಗ್ರ ಅಧ್ಯಯನ ಮಾಡಲಾಗಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
`ಬೆಂಗಳೂರಿನಲ್ಲಿ ಪಾಲಿಕೆಯ ತಪ್ಪಿದ್ದರೂ 78 ಸಾವಿರ ಜನರಿಗೆ ನೋಟಿಸ್ ನೀಡಲಾಗಿದೆ. ಇಲ್ಲಿ ಸರಕಾರಕ್ಕೆ ತೆರಿಗೆ ಪಾವತಿಸದವರಿಂದ ತೆರಿಗೆ ಸಂಗ್ರಹಿಸಲಿ ಅದನ್ನು ಪ್ರಶ್ನಿಸುವುದಿಲ್ಲ. ಆದರೆ, ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರ ಮೇಲೆ ದೌರ್ಜನ್ಯ ನಡೆಸುವಂತಹ ನಿರ್ಧಾರವನ್ನು ಖಂಡಿಸುತ್ತೇವೆ. ಈ ರೀತಿ ದೌರ್ಜನ್ಯಕ್ಕೆ ಒಳಗಾಗುವ ಜನರ ರಕ್ಷಣೆಗೆ ನಾವು ಧಾವಿಸುತ್ತೇವೆ. ಈಗ ನೀಡಿರುವ ನೋಟಿಸ್ ಅನ್ನು ಹಿಂಪಡೆಯಬೇಕು' ಎಂದು ಶಿವಕುಮಾರ್ ಒತ್ತಾಯಿಸಿದರು.
`2020ರಲ್ಲಿ ಹೊಸ ಕಾಯ್ದೆ ತಂದ ಮೇಲೆ ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಬೇಕು. ಮಾತೆತ್ತಿದರೆ ಗುಜರಾತ್ ಮಾದರಿ ಎನ್ನುತ್ತಾರೆ. ಹಾಗಾದರೆ ಗುಜರಾತಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಲ ಮಾದರಿಯ ತೆರಿಗೆಯನ್ನು ಒಂದು ವರ್ಷಗಳ ಕಾಲ ಮನ್ನಾ ಮಾಡಲಾಗಿದೆ. ಅದೇ ರೀತಿ ಆಸ್ತಿ ಹಾಗೂ ವಾಣಿಜ್ಯ ತೆರಿಗೆಯನ್ನು ಮನ್ನಾ ಮಾಡಿ ಎಂದು ಸರಕಾರವನ್ನು ಒತ್ತಾಯ ಮಾಡುತ್ತೇವೆ. ಒಂದು ವೇಳೆ ಜನ ಈ ತೆರಿಗೆ ಕಟ್ಟಿದ್ದರೆ ಅದನ್ನು ಮುಂದಿನ ಸಾಲಿಗೆ ಸೇರಿಸಿಕೊಳ್ಳಲಿ' ಎಂದು ಶಿವಕುಮಾರ್ ಸಲಹೆ ಮಾಡಿದರು.
`ತಪ್ಪು ವಲಯವಾರು ವಿಂಗಡಣೆ ಎಂದು ಹೇಳಿ ಅಧಿಕಾರಿಗಳು ಮಾಡುತ್ತಿರುವ ದೌರ್ಜನ್ಯವನ್ನು ಕಾಂಗ್ರೆಸ್ ಪಕ್ಷದ ವತಿಯಿಂದ ನಾವೆಲ್ಲರೂ ಖಂಡಿಸುತ್ತೇವೆ. ತಪ್ಪು ವಲಯ ವಿಂಗಡಣೆಯಲ್ಲಿ ಜನರಿಗೆ ಎಲ್ಲೂ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿಲ್ಲ. ಹೀಗಾಗಿ ಜನರು ಈ ನೋಟೀಸ್ ಪ್ರಕಾರ ತೆರಿಗೆ ಪಾವತಿ ಮಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಕೂಡಲೇ ಈ ಕ್ರಮವನ್ನು ಹಿಂಪಡೆಯಬೇಕು. ಒಂದು ರಸ್ತೆಯಲ್ಲಿ ಐದಾರು ಮನೆ ಖಾಲಿ ಇವೆ. ಈ ಸಮಯದಲ್ಲಿ ತೆರಿಗೆ ಹೆಸರಲ್ಲಿ ದರೋಡೆ ಮಾಡುವುದು ಸರಿಯಲ್ಲ'
-ಪದ್ಮಾವತಿ ಮಾಜಿ ಮೇಯರ್







