ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿವಾಹ ನೋಂದಣಿಗೆ ಹೈಕೋರ್ಟ್ ಅನುಮತಿ

ತಿರುವನಂತಪುರಂ, ಆ.7: ವಿದೇಶದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ವಿವಾಹವನ್ನು ವೀಡಿಯೊ ಕಾನ್ಫರೆನ್ಸಿಂಗ್ ವ್ಯವಸ್ಥೆಯ ಮೂಲಕ ನೋಂದಣಿ ಮಾಡಿಕೊಳ್ಳಲು ಕೇರಳ ಹೈಕೋರ್ಟ್ ಅನುಮತಿ ನೀಡಿದೆ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ನಿರ್ಬಂಧದಿಂದಾಗಿ ತನಗೆ ವೈಯಕ್ತಿವಾಗಿ ಉಪಸ್ಥಿತರಿರಲು ಆಗುವುದಿಲ್ಲ ಎಂಬ ಅರ್ಜಿಯನ್ನು ಹೈಕೋರ್ಟ್ ಮಾನ್ಯ ಮಾಡಿದೆ.
2019ರ ಜುಲೈಯಲ್ಲಿ ತಾವಿಬ್ಬರು 1954ರ ವಿಶೇಷ ವಿವಾಹ ಕಾಯ್ದೆಯಡಿ ವಿವಾಹವಾಗಿದ್ದು ಬಳಿಕ ಪತಿ ಉದ್ಯೋಗಕ್ಕಾಗಿ ಕೆನಡಾಕ್ಕೆ ತೆರಳಿದ್ದಾರೆ. ಆದರೆ ಕೊರೋನ ಸೋಂಕಿನ ಕಾರಣ ಜಾರಿಯಲ್ಲಿರುವ ನಿರ್ಬಂಧದಿಂದಾಗಿ ಪತಿ ಭಾರತಕ್ಕೆ ವಾಪಸಾಗಿ ವಿವಾಹ ನೋಂದಣಾಧಿಕಾರಿಯೆದುರು ವೈಯಕ್ತಿಕ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಈ ಪ್ರಕ್ರಿಯೆಗೆ ಅನುವು ಮಾಡಿಕೊಡುವಂತೆ ಸೂಚಿಸಬೇಕು ಎಂದು 28 ವರ್ಷದ ಮಹಿಳೆಯೊಬ್ಬರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಈಗಿರುವ ಪರಿಸ್ಥಿತಿಯಲ್ಲಿ ವಿದೇಶದಲ್ಲಿರುವ ವ್ಯಕ್ತಿ ದೇಶಕ್ಕೆ ವಾಪಸಾಗಲು ಸಮಸ್ಯೆ ಇರುವುದಿಂದ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿವಾಹ ನೋಂದಣಿ ಪ್ರಕ್ರಿಯೆ ನಡೆಸಿ 10 ದಿನದೊಳಗೆ ವಿವಾಹ ಪ್ರಮಾಣಪತ್ರ ನೀಡುವಂತೆ ವಿವಾಹ ನೋಂದಣಾಧಿಕಾರಿಗೆ ಆದೇಶಿಸಿದೆ.





