ಎಲ್ಲ ರಾಜ್ಯಗಳು ಒಂದೊಂದು ಕ್ರೀಡೆಯನ್ನು ಪ್ರೋತ್ಸಾಹಿಸಬೇಕು: ಎಚ್.ಡಿ.ಕುಮಾರಸ್ವಾಮಿ
‘ಒಲಿಂಪಿಕ್ಸ್ ಸಾಧಕರಿಗೆ ಅಭಿನಂದನೆ’

ಬೆಂಗಳೂರು, ಆ.7: ಟೋಕಿಯೊ ಒಲಿಂಪಿಕ್ಸ್‍ನ ಜಾವೆಲಿನ್ ಥ್ರೋ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ, ಭಾರತಕ್ಕೆ ಚೊಚ್ಚಲ ಚಿನ್ನದ ಪದಕ ಗೆದ್ದು ಕೊಟ್ಟ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು. ಚಿನ್ನದ ಸಾಧನೆ ಮಾಡುವ ಮೂಲಕ ನೀರಜ್ ಚೋಪ್ರಾ ಭಾರತದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಿದ್ದಾರೆ. ನೀರಜ್ ಸಾಧನೆ ಪ್ರೇರಣದಾಯಕ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಅವರು, ಕನ್ನಡತಿ, ಜಮಖಂಡಿ ಮೂಲದ ಅದಿತಿ ಅಶೋಕ್ ಟೋಕಿಯೊ ಒಲಿಂಪಿಕ್ಸ್‍ನಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ. ಗಾಲ್ಫ್‍ನಲ್ಲಿ 4ನೇ ಸ್ಥಾನ ಗಳಿಸಿರುವ ಅದಿತಿ ಪದಕ ಗೆಲ್ಲದಿರಬಹುದು, ಆದರೆ ಭಾರತದ ಒಲಿಂಪಿಕ್ಸ್ ಅಭಿಯಾನದ ಗಾಲ್ಫ್ ಆಟದಲ್ಲಿ ಅದಿತಿ ಅವರದ್ದೇ ಶ್ರೇಷ್ಠ ಸಾಧನೆ. ಇದಕ್ಕಾಗಿ ಭಾರತ ಆಕೆಯನ್ನು ಎಂದಿಗೂ ನೆನಪಿನಲ್ಲಿಟ್ಟುಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ಒಲಿಂಪಿಕ್ಸ್ ನಲ್ಲಿ ನಮ್ಮ ಹಾಕಿ ತಂಡಗಳು ಅಚ್ಚರಿ ಮೂಡಿಸಿದ್ದು, 41 ವರ್ಷಗಳ ಬಳಿಕ ಪುರುಷರ ತಂಡ ಪದಕ ಗೆದ್ದರೆ, ಮಹಿಳಾ ತಂಡ ನೆನಪಿಟ್ಟುಕೊಳ್ಳವ ಸಾಧನೆ ಮಾಡಿದೆ. ಇದರ ಹಿಂದೆ ಒಡಿಶಾ ಸರಕಾರದ ಪೆÇ್ರೀತ್ಸಾಹ ಇರುವುದು ಗಮನಾರ್ಹ. ಹಾಕಿ ತಂಡದ ಪ್ರಯೋಜಕತೆ ಪಡೆದ ಒಡಿಶಾ ತಂಡಕ್ಕೆ ಸಕಲವನ್ನು ಒದಿಗಿಸಿ ಪ್ರೋತ್ಸಾಹಿಸಿತು. ಒಡಿಶಾದ ಕ್ರಮ ಅನುಕರಣೀಯ ಎಂದು ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಡಿಶಾ ಹಾಕಿಯನ್ನು ಪ್ರೋತ್ಸಾಹಿಸಿದಂತೆ ಎಲ್ಲ ರಾಜ್ಯಗಳೂ ಒಂದೊಂದು ಕ್ರೀಡೆಯನ್ನು ಪ್ರೋತ್ಸಾಹಿಸುವ ಅವಶ್ಯಕತೆ ಇದೆ. ಈ ಮೂಲಕ ಪ್ರತಿಯೊಂದು ಕ್ರೀಡೆಗೆ ಪ್ರೋತ್ಸಾಹ ಸಿಗುವಂತೆ ಮಾಡುವುದು, ವಿಶ್ವ ಮಟ್ಟದ ಕೂಟದಲ್ಲಿ ಭಾರತದ ಘನತೆ ಎತ್ತಿ ಹಿಡಿಯುವುದು ಆದ್ಯತೆ ಆಗಬೇಕು. ಸಂಸದೀಯ ಸ್ಥಾಯಿಸಮಿತಿ(ಕ್ರೀಡೆ) ಇದೇ ಶಿಫಾರಸ್ಸನ್ನು ಕೇಂದ್ರಕ್ಕೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.







