ಹಾಕಿ ಆಟಗಾರ್ತಿ ವಂದನಾ ಕುಟುಂಬದ ವಿರುದ್ಧ ಜಾತಿ ನಿಂದನೆ ಪ್ರಕರಣ : ಇನ್ನೋರ್ವ ಆರೋಪಿಯ ಬಂಧನ

ಹೊಸದಿಲ್ಲಿ, ಆ. 7: ಟೋಕಿಯೊ ಒಲಿಂಪಿಕ್ಸ್ನಲ್ಲಿ ಅರ್ಜೆಂಟೈನಾದ ವಿರುದ್ಧ ಸೋತ ಭಾರತದ ಮಹಿಳಾ ಹಾಕಿ ತಂಡದ ಆಟಗಾರ್ತಿ ವಂದನಾ ಕಟಾರಿಯಾ ಅವರ ಕುಟುಂಬದ ಸದಸ್ಯರ ವಿರುದ್ಧ ಜಾತಿ ನಿಂದನೆ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿ ಮೂರನೆ ಆರೋಪಿಯನ್ನು ಹರಿದ್ವಾರ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಮಾಹಿತಿದಾರರು ನೀಡಿದ ಮಾಹಿತಿಯ ಆಧಾರದಲ್ಲಿ ಸುಮಿತ್ ಚೌಹಾನ್ (23)ನನ್ನು ಇಂದು ಬೆಳಗ್ಗೆ ಬಂಧಿಸಲಾಗಿದೆ ಎಂದು ಪೊಲೀಸರ ಹೇಳಿಕೆ ತಿಳಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಸಹೋದರರಾದ ಅಂಕುರ್ಪಾಲ್ (21) ಹಾಗೂ ವಿಜಯ್ಪಾಲ್ (25)ರನ್ನು ಪೊಲೀಸರು ಗುರುವಾರ ಬಂಧಿಸಿದ್ದರು.
ಅರ್ಜೆಂಟೈನಾದ ವಿರುದ್ಧ ಭಾರತದ ಹಾಕಿ ತಂಡ ಸೋತಾಗ ಸುಮೀತ್ ಚೌಹಾನ್, ಅಂಕುರ್ಪಾಲ್ ಹಾಗೂ ವಿಜಯ್ಪಾಲ್ ರೋಶನಬಾದ್ ಪ್ರದೇಶದಲ್ಲಿರುವ ತಮ್ಮ ಮನೆಯ ಎದುರು ನರ್ತಿಸಿದ್ದಾರೆ, ಪಟಾಕಿ ಒಡೆದಿದ್ದಾರೆ ಹಾಗೂ ಕುಟುಂಬದ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ವಂದನಾ ಅವರ ಸಹೋದರ ಚಂದ್ರ ಶೇಖರ್ ಸಿದ್ಕುಲ್ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಿಸಿದ್ದರು.
ನಿರ್ದಿಷ್ಟ ಜಾತಿಯ ಆಟಗಾರರು ಇದ್ದ ಕಾರಣಕ್ಕೆ ಭಾರತದ ತಂಡ ಸೋತಿದೆ ಎಂದು ಈ ಮೂವರು ಆರೋಪಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.







