ಟೋಕಿಯೊದಿಂದ ವಾಪಸಾದ ಬಳಿಕ ತನ್ನ ತಂಗಿಯ ಸಾವಿನ ಸುದ್ದಿ ಕೇಳಿ ಕಣ್ಣೀರಿಟ್ಟ ಒಲಿಂಪಿಯನ್ ಧನಲಕ್ಷ್ಮಿ ಶೇಖರ್

photo : news18.com
ಚೆನ್ನೈ: ಒಲಿಂಪಿಕ್ಸ್ಗಾಗಿ ಟೋಕಿಯೊದಲ್ಲಿದ್ದಾಗ ತನ್ನ ಸಹೋದರಿ ಸಾವನ್ನಪ್ಪಿರುವ ವಿಚಾರವನ್ನು ಸ್ವದೇಶಕ್ಕೆ ವಾಪಸಾದ ಬಳಿಕ ತಿಳಿದುಕೊಂಡ ಒಲಿಂಪಿಯನ್ ಧನಲಕ್ಷ್ಮಿ ಶೇಖರ್ ದುಃಖ ತಡೆಯಲಾರದೆ ಕಣ್ಣೀರಿಟ್ಟರು.
ಧನಲಕ್ಷ್ಮಿ ಹಾಗೂ ಇನ್ನೊಬ್ಬ ಓಟಗಾರ್ತಿ ಶುಭಾ ವೆಂಕಟರಮಣ ಶನಿವಾರ ಜಪಾನ್ ನಿಂದ ತಮಿಳುನಾಡಿನ ತಿರುಚಿರಾಪಳ್ಳಿ ಬಳಿಯ ಗುಂಡೂರು ಗ್ರಾಮಕ್ಕೆ ಮರಳಿದರು. ಧನಲಕ್ಷ್ಮಿ ತವರೂರಿಗೆ ಬಂದಾಗ ಅವರನ್ನು ಸುತ್ತುವರಿದ ಜನರು ಅದ್ಧೂರಿಯಾಗಿ ಸ್ವಾಗತಿಸಿದರು. ಅದ್ದೂರಿ ಸ್ವಾಗತ ಪಡೆದ ಸಂಭ್ರಮದಲ್ಲಿದ್ದ ಧನಲಕ್ಷ್ಮಿ ತಂಗಿಯ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದರು.
ಧನಲಕ್ಷ್ಮಿ 4x400ಮೀ. ಮಿಶ್ರ ರಿಲೇ ತಂಡಕ್ಕೆ ಮೀಸಲು ಓಟಗಾರ್ತಿಯಾಗಿದ್ದು ಅದರಲ್ಲಿ ಶುಭಾ ಭಾಗಿಯಾಗಿದ್ದರು. ಈ ವರ್ಷದ ಆರಂಭದಲ್ಲಿ ಪಟಿಯಾಲಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ನಲ್ಲಿ (ಎನ್ಐಎಸ್) ಉತ್ತಮ ಪ್ರದರ್ಶನ ನೀಡಿದ ನಂತರ ಅವರು ತಂಡಕ್ಕೆ ಮೀಸಲು ಓಟಗಾರ್ತಿಯಾಗಲು ಅರ್ಹತೆ ಪಡೆದಿದ್ದರು.
ಧನಲಕ್ಷ್ಮಿ ಮನೆಗೆ ಮರಳಿದ ಬಳಿಕ ತನ್ನ ಸಹೋದರಿಯು ಅನಾರೋಗ್ಯದಿಂದ ಸಾವನ್ನಪ್ಪಿದ ಬಗ್ಗೆ ತಿಳಿದುಕೊಂಡರು. ಧನಲಕ್ಷ್ಮಿ ಒಲಿಂಪಿಕ್ಸ್ನತ್ತ ಗಮನಹರಿಸಬೇಕೆಂದು ಬಯಸಿದ್ದರಿಂದ ಕುಟುಂಬದವರು ಸಾವಿನ ಸುದ್ದಿಯನ್ನು ಆಕೆಯಿಂದ ಮುಚ್ಚಿಟ್ಟಿದ್ದರು.
ಬಡ ಕುಟುಂಬದಲ್ಲಿ ಜನಿಸಿರುವ ಧನಲಕ್ಷ್ಮಿ ಬಾಲ್ಯದಲ್ಲೇ ತಂದೆ ಶೇಖರ್ ಅವರನ್ನು ಕಳೆದುಕೊಂಡಿದ್ದರು. ಆಕೆಯ ತಾಯಿ ಉಷಾ ಅವರು ಧನಲಕ್ಷ್ಮಿಯನ್ನು ಲಾಲನೆ ಪಾಲನೆ ಮಾಡಿದ್ದರು.