ರಾಜ್ಯಾದ್ಯಂತ ಮಕ್ಕಳ ಆರೋಗ್ಯ ತಪಾಸಣೆ: ಸಿಎಂ ಬಸವರಾಜ ಬೊಮ್ಮಾಯಿ
"ಕೊರೋನ ಮೂರನೇ ಅಲೆ ಎದುರಿಸಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮ"

ಮೈಸೂರು,ಆ.9: ಕೊರೋನ ಮೂರನೇ ಅಲೆ ಬಂದರೆ ಎದುರಿಸಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಜಿ.ಪಂ.ಸಭಾಂಗಣದಲ್ಲಿ ಸೋಮವಾರ ಕೊರೋನಾ ಮೂರನೇ ಅಲೆ ಸಂಬಂಧ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮಕಾರಿ ಎಂದು ತಜ್ಞರು ವರದಿ ನೀಡಿದ್ದಾರೆ.
ರಾಜ್ಯದ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಶಾಲೆಗೆ ಬರುವ ಹಾಗೂ ಬಾರದ ಮಕ್ಕಳು 6 ರಿಂದ 14 ವರ್ಷದ ಮಕ್ಕಳಿಗೆ ಶಿಬಿರದ ವತಿಯಿಂದ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಪ್ರತಿಯೊಂದು ಗ್ರಾಮ ಹಾಗೂ ಶಾಲೆಯಲ್ಲಿ ಹೆಲ್ತ್ ಕ್ಯಾಂಪ್ ಮಾಡಲಾಗುತ್ತದೆ ಎಂದು ತಿಳಿಸಿದರು.
'ಮೈಸೂರು ನಗರದಿಂದಲೇ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತೇವೆ. ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ತಪಾಸಣೆ ಮಾಡಬೇಕು. ಮಕ್ಕಳಿಗೆ ಹ್ಯುಮ್ಯುನಿಟಿ ಕೊರತೆಯಾಗದಂತೆ ಕ್ರಮವಹಿಸಲಾಗುವುದು ಎಂದ ಅವರು ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡುತ್ತೇವೆ' ಎಂದರು.
ಕೊರೊನಾ ಮೂರನೇ ಅಲೆ ಬಾರದಿರಲಿ ಎಂದು ಪ್ರಾರ್ಥಿಸುತ್ತಿದ್ದೇನೆ. ಒಂದು ವೇಳೆ ಕೊರೊನಾದ ಮೂರನೇ ಅಲೆ ಬಂದರೂ ಅದನ್ನು ಎದುರಿಸಲು ಸಿದ್ದತೆ ಮಾಡಿಕೊಂಡಿದ್ದೇವೆ. ಮೊದಲ ಮತ್ತು ಎರಡನೇ ಕೊರೊನಾ ಅಲೆಯನ್ನು ಎದುರಿಸಿರುವ ಅನುಭವದ ಆಧಾರದ ಮೇಲೆ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸುತ್ತೇವೆ. ಮಹಾರಾಷ್ಟ್ರ, ಕೇರಳ ಮೂಲದಿಂದ ಮೊದಲ ಹಾಗೂ ಎರಡನೇ ಅಲೆ ರಾಜ್ಯಕ್ಕೆ ಅಪ್ಪಳಿಸಿತ್ತು. ಹಾಗಾಗಿ ರಾಜ್ಯದ ಗಡಿ ಭಾಗದಲ್ಲಿ ವಿಶೇಷ ನಿಗಾ ವಹಿಸಲಾಗಿದೆ. ಗಡಿ ಭಾಗದ ಹತ್ತು ಕಿ ಮೀ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಕೊರೊನಾ ಲಸಿಕೆ ಹಾಕುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡು ಕೊರೊನಾದ ಮೂರನೆ ಅಲೆ ವ್ಯಾಪಿಸದಂತೆ ತಡೆಗಟ್ಟಲಾಗುವುದು ಎಂದು ಹೇಳಿದರು.
ಅಧಿಕಾರಿಗಳು ಚೆಕ್ ಪೋಸ್ಟ್ ನಲ್ಲಿ ಕಟ್ಟುನಿಟ್ಟಾಗಿ ಕೆಲಸ ಮಾಡಬೇಕು. ಚೆಕ್ ಪೋಸ್ಟ್ ನಲ್ಲಿ ಕೆಲಸ ಮಾಡುವ ಎಲ್ಲರಿಗೂ ವ್ಯಾಕ್ಸಿನೇಷನ್ ಆಗಬೇಕು. ಸದ್ಯ ರಾಜ್ಯಕ್ಕೆ 65 ಲಕ್ಷ ಡೋಸ್ ಲಸಿಕೆ ಬರುತ್ತಿದೆ. ಮುಂದಿನ ದಿನಗಳಿಗೆ 1 ಕೋಟಿ ಲಸಿಕೆಗೆ ಮನವಿ ಮಾಡಲಾಗಿದೆ. ಮುಂದಿನ ತಿಂಗಳಿನಿಂದ 1.5 ಕೋಟಿ ಲಸಿಕೆ ಬಂದ್ರೆ ದಿನಕ್ಕೆ 5 ಲಕ್ಷ ವ್ಯಾಕ್ಸಿನೇಷನ್ ಗುರಿ ಹೊಂದಿದ್ದೇವೆ. ಸದ್ಯ 9 ಸಾವಿರ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಮೈಸೂರು ಜಿಲ್ಲೆಗೆ ಮಂಡ್ಯ, ಚಾ,ನಗರ, ಕೊಡಗು, ಕೇರಳ ದಿಂದ ಹೆಚ್ಚು ಜನ ಬರ್ತಾರೆ. ಹೀಗಾಗಿ ಮೈಸೂರಿನಲ್ಲಿ ಹೆಚ್ಚು ಟೆಸ್ಟ್ ಆಗಬೇಕು. ಮೈಸೂರಿನಲ್ಲಿ 14 ಆಕ್ಸಿಜನ್ ಜನರೇಟರ್ ಮುಂಜೂರಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.







