ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ-2021 ವಿರೋಧಿಸಿ ವಿದ್ಯುತ್ ನೌಕರರಿಂದ ಕೆಲಸ ಬಹಿಷ್ಕಾರದ ಎಚ್ಚರಿಕೆ
ಬೆಂಗಳೂರು, ಆ. 9: ಕೇಂದ್ರ ಸರಕಾರ ಮಂಡಿಸಲು ಉದ್ದೇಶಿರುವ ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ-2021 ಅನ್ನು ವಿರೋಧಿಸಿ ಅಖಿಲ ಭಾರತ ವಿದ್ಯುತ್ ಇಂಜಿನಿಯರುಗಳ ಒಕ್ಕೂಟ ಹಾಗೂ ರಾಷ್ಟ್ರೀಯ ವಿದ್ಯುತ್ ನೌಕರರು ಮತ್ತು ಇಂಜಿನಿಯರುಗಳ ಸಮನ್ವಯ ಸಮಿತಿ ಸಹಯೋಗದೊಂದಿಗೆ ನಾಳೆ(ಆ.10) ರಾಷ್ಟ್ರಾದ್ಯಂತ ವಿದ್ಯುತ್ ಕ್ಷೇತ್ರದ ನೌಕರರು, ಅಧಿಕಾರಿಗಳು ಕೆಲಸ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿವೆ.
ಸೋಮವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ನೌಕರರ ಸಂಘ ಮತ್ತು ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಟಿ.ಆರ್.ರಾಮಕೃಷ್ಣಯ್ಯ ಮಾತನಾಡಿ, ಕೇಂದ್ರ ಸರಕಾರ ಲೋಕಸಭೆಯಲ್ಲಿ ಮಂಡಿಸಲು ಉದ್ದೇಶಿರುವ ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಯಿಂದ ಖಾಸಗಿ ಬಂಡವಾಳಶಾಹಿಗಳಿಗೆ ಅನುಕೂಲವಾಗಲಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಜನರಿಗೆ ವಿದ್ಯುತ್ ಬೆಲೆ ಏರಿಕೆಯಾಗಲಿದೆ. ಹೀಗಾಗಿ ವಿದ್ಯುತ್ ಪೂರೈಕೆಯನ್ನು ಖಾಸಗೀಕರಣ ಗೊಳಿಸುವುದನ್ನು ತಪ್ಪಿಸಬೇಕು ಎಂದರು.
ಕೋವಿಡ್ ಮತ್ತು ಬೆಲೆ ಏರಿಕೆಯಿಂದ ಜನರು ತಮ್ಮ ಹಾಗೂ ವಿದ್ಯಾವಂತರು ನಿರುದ್ಯೋಗಿಗಳಾಗುತ್ತಿದ್ದಾರೆ. ಈ ಮಧ್ಯೆ ಸರಕಾರಗಳು ಜನರ ಕಲ್ಯಾಣ ಕಾರ್ಯಕ್ರಮಗಳನ್ನು ಕೈಬಿಟ್ಟು ಜನ ವಿರೋಧಿ ಕಾಯ್ದೆಗಳ ಮೂಲಕ ಅಭಿವೃದ್ಧಿಗೆ ಹಿನ್ನಡೆಯುಂಟು ಮಾಡುವುದು ಸಲ್ಲ ಎಂದು ಆಕ್ಷೇಪಿಸಿದ ಅವರು, ಇಂದಿನ ದಿನಗಳಲ್ಲಿ ಸೌರ ವಿದ್ಯುತ್ ಉತ್ಪಾದನೆ ದರ ಅಧಿಕವಾಗಿದ್ದು ವಿಶೇಷವಾಗಿ ಖಾಸಗಿ ಕಂಪೆನಿಗಳ ಒಡೆತನದಲ್ಲಿರುವ ವಿದ್ಯುತ್ ದರ ಯೂನಿಟ್‍ಗೆ 15 ರೂ.ವರೆಗೆ ಹೆಚ್ಚಿಸಲಾಗಿದೆ. ಸೇವಾ ಶುಲ್ಕದ ಹೆಸರಿನಲ್ಲಿ ಅತಿ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತದೆ ಎಂದು ದೂರಿದರು.
ರೈತರಿಗೆ ಉಚಿತ ವಿದ್ಯುತ್ ನೀಡುತ್ತಿರುವ ರಾಜ್ಯ ಸರಕಾರದಿಂದ ವಿದ್ಯುತ್ ಸಹಾಯಧನ ಹಿಂಪಡೆದು ಪ್ರಸ್ತುತ ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆಯಲ್ಲಿ ರೈತರಿಗೆ ನೇರ ನದು ವರ್ಗಾವಣೆ ಸೌಲಭ್ಯ ನೀಡಲು ಉದ್ದೇಶಿಸಲಾಗಿದೆ. ಇದು ಕೃಷಿ ಪಂಪ್ ಸೆಟ್‍ಗಳಿಗೆ ಮೀಟರ್ ಆಳವಡಿಕೆ ಹುನ್ನಾರ ಅಡಗಿದೆ. ಇದರಿಂದ ಭೂಮಿ ಮಾಲಕ ರೈತರಿಗೆ ನೆರವಾಗಲಿದೆ. ಆದರೆ, ಭೂಹೀನ ರೈತರಿಗೆ ಅನ್ಯಾಯವಾಗಲಿದೆ. ಬಡಜನ ಉಚಿತ ವಿದ್ಯುತ್ ಕಡಿತಗೊಳ್ಳಲಿದೆ. ಗೃಹ ಬಳಕೆ ವಿದ್ಯುತ್ ಮತ್ತಷ್ಟು ದುಬಾರಿಯಾಗಲಿದೆ ಎಂದು ಎಚ್ಚರಿಸಿದರು.
ವಿದ್ಯುತ್ ಪೂರೈಕೆ ಗ್ರಾಹಕ ಹಾಗೂ ನಾಗರಿಕ ಸೇವೆಯಾಗಿದೆ. ವಿದ್ಯುಚ್ಛಕ್ತಿ ಖಾಸಗಿಕರಣದಿಂದ ಜನರಿಗೆ ಲಾಭ ಆಗುವ ಬದಲಿಗೆ ಕಂಪೆನಿಗಳನ್ನು ಉದ್ಧಾರ ಆಗುತ್ತವೆ. ಕೇಂದ್ರದ ನೂತನ ಕಾಯಿದೆ ಜಾರಿಗೆ ಬಂದರೆ ರಾಜ್ಯದ ವಿದ್ಯುತ್ ಪೂರೈಕೆ ಅಧಿಕಾರ ಮೊಟಕುಗೊಳ್ಳಲಿದ್ದು, ಒಕ್ಕೂಟ ವ್ಯವಸ್ಥೆಗೆ ದಕ್ಕೆಯಾಗಲಿದೆ. ಮಾತ್ರವಲ್ಲ ಆರಾಜಕತೆ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದ ಅವರು, ಈ ಕಾಯ್ದೆ ಜಾರಿಯಾದರೆ ದೇಶದಲ್ಲಿ ಸುಮಾರು 18 ಲಕ್ಷ ನೌಕರರು ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಇಂತಹ ಮಾರಕ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುವುದು ಅಗತ್ಯ. ಹೀಗಾಗಿ ಪ್ರತಿಭಟನೆಗೆ ತೀರ್ಮಾನಿಸಲಾಗಿದೆ ಎಂದರು.
ಸಂಘದ ಪದಾಧಿಕಾರಿಗಳಾದ ಶಿವಪ್ರಕಾಶ್, ಲಕ್ಷ್ಮೀಪತಿ, ಎಸ್.ಆರ್.ರಾಜನಾಯ್ಕ್, ಬಲರಾಮ್, ಕೆಪಿಟಿಸಿಎಲ್ ಕನ್ನಡ ಸಂಘದ ಕಾರ್ಯದರ್ಶಿ ಎ.ಆರ್.ಗೋವಿಂದಸ್ವಾಮಿ, ಕೆಪಿಟಿಸಿಎಲ್ ಎಸ್ಸಿ-ಎಸ್ಟಿ ನೌಕರರ ಸಂಘದ ದಾಸ್ ಪ್ರಕಾಶ್, ಗುರುಲಿಂಗಯ್ಯ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದರು.
ಮುಷ್ಕರಕ್ಕೆ ಬೆಂಬಲ: ಕೋವಿಡ್ ಸಂಕಷ್ಟದಿಂದ ಜನತೆ ಪರದಾಡುವ ಸಂದರ್ಭದಲ್ಲಿ ಕೇಂದ್ರ ಸರಕಾರ ದೇಶದ ಆಸ್ತಿಯನ್ನು ತನ್ನ ಆಪ್ತರಿಗೆ ಮಾರಾಟ ಮಾಡಲು ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ ಮಂಡನೆಗೆ ಮುಂದಾಗಿದೆ. ಇದನ್ನು ವಿರೋಧಿಸಿ ವಿದ್ಯುಚ್ಛಕ್ತಿ ಇಲಾಖೆ ಇಂಜಿನಿಯರ್ ಗಳ ಮತ್ತು ನೌಕರರ ನಡೆಸುತ್ತಿರುವ ಒಂದು ದಿನದ ಮುಷ್ಕರಕ್ಕೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಬೆಂಬಲ ನೀಡಲಿದೆ. ಕೇಂದ್ರ ಸರಕಾರ ವಿದ್ಯುಚ್ಛಕ್ತಿ ನಿಗಮಗಳ ಖಾಸಗಿಕರಣಗೊಳಿಸುವ ಜನವಿರೋಧಿ ಕ್ರಮಗಳನ್ನು ಕೂಡಲೇ ಕೈಬಿಡಬೇಕು ಎಂದು ಸಿಐಟಿಯು ಅಧ್ಯಕ್ಷ ಎಸ್.ವರಲಕ್ಷ್ಮಿ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.
`ಕೇಂದ್ರ ಹಾಗೂ ರಾಜ್ಯ ಇಂಧನ ಸಚಿವರ ಆಶ್ವಾಸನೆ ಹಿನ್ನೆಲೆಯಲ್ಲಿ ಅಖಿಲ ಭಾರತ ವಿದ್ಯುತ್ ಮಂಡಳಿ ನೌಕರರು, ಇಂಜಿನಿಯರುಗಳು ಮತ್ತು ಅಧಿಕಾರಿಗಳ ಒಕ್ಕೂಟದ ಸೂಚನೆ ಮೇರೆಗೆ ನಾಳೆ(ಆ.10) ಹಮ್ಮಿಕೊಂಡಿದ್ದ `ಕೆಲಸ ಬಹಿಷ್ಕಾರ' ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ'
-ಟಿ.ಆರ್.ರಾಮಕೃಷ್ಣಯ್ಯ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ನೌಕರರ ಸಂಘಗಳ ಒಕ್ಕೂಟ ಅಧ್ಯಕ್ಷ







