ಕೃಷಿ ವಲಯದಲ್ಲಿ ಕಂಪೆನಿಗಳಿಗೆ ಅವಕಾಶ ಕೊಡಲು ಬಿಡಲ್ಲ: ಕೋಡಿಹಳ್ಳಿ ಚಂದ್ರಶೇಖರ

ಬೆಂಗಳೂರು, ಆ.9: ಸರಕಾರ ಎಲ್ಲ ಕ್ಷೇತ್ರವನ್ನು ಖಾಸಗೀಕರಣ ಮಾಡುತ್ತಿದೆ, ವಿದ್ಯುತ್ ಖಾಸಗೀಕರಣ ಆಗಬಾರದು. ಇದರಿಂದ, ರೈತರು ಕಷ್ಟಕ್ಕೆ ಸಿಲುಕುತ್ತಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸೋಮವಾರ ನಗರದ ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದ್ಯುತ್ ಉತ್ಪಾದನೆ ಹಾಗೂ ವಿತರಣೆಯನ್ನು ಖಾಸಗಿ ಅವರಿಗೆ ನೀಡಲು ಸರಕಾರ ಮುಂದಾಗಿದ್ದು, ಇದರಿಂದ, ದೇಶದ ಜನರನ್ನು ಬರಿ ಕೈ ಮಾಡಲು ಮುಂದಾಗಿದೆ. ಇದರಿಂದ, ಕೃಷಿ ವಲಯಕ್ಕೆ ಹೆಚ್ಚಿನ ಸಮಸ್ಯೆ ಆಗುತ್ತಿದೆ. ಇದು ಸರಿಯಲ್ಲ ಎಂದರು.
ರೈತರು ಬೆಳೆ ಬೆಳೆಯಲು, ಪಂಪ್‍ಸೆಟ್ ಸಬ್ಸಿಡಿ ಬಂದ್ ಆಗುತ್ತದೆ ಹಾಗೂ ವಿದ್ಯುತ್ ಬೆಲೆ ಏರಿಕೆಯಾಗಲಿದೆ. ಪಂಪ್‍ಸೆಟ್‍ಗಳಿಗೆ ಮೀಟರ್ ಫಿಕ್ಸ್ ಮಾಡುತ್ತಾರೆ. ಇದರಿಂದ, ರೈತರಿಗೆ ಅನಾನುಕೂಲವಾಗಲಿದೆ. ಇದು ನಿಲ್ಲಬೇಕು ಎಂದು ಹೇಳಿದರು.
ಕೃಷಿ ವಲಯದಲ್ಲಿ ಯಾವುದೇ ಕಂಪೆನಿಗಳಿಗೆ ಅವಕಾಶ ಕೊಡಲು ನಾವು ಬಿಡುವುದಿಲ್ಲ. ಸರಕಾರಿ ಕ್ಷೇತ್ರದಲ್ಲೇ ಮುಂದುವರೆಯಲಿ ಎಂದು ಆ.10ರಂದು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಆ.10ರಂದು ವಿದ್ಯುತ್ ನಿಗಮದ ನೌಕರರೂ ಕೆಲಸಕ್ಕೆ ಹಾಜರಾಗದೇ ಪ್ರತಿಭಟನೆ ನಡೆಸುತ್ತಾರೆ. ಕೆಪಿಟಿಸಿಎಲ್ ಪ್ರತಿಭಟನೆಗೂ ರೈತ ಸಂಘಟನೆಗಳ ಬೆಂಬಲ ನೀಡಲಿದ್ದಾರೆ ಎಂದರು.







