ಅಮೆಜಾನ್, ಫ್ಲಿಪ್ ಕಾರ್ಟ್ ವಿರುದ್ಧದ ವಿಶ್ವಾಸದ್ರೋಹ ತನಿಖೆ ಸ್ಥಗಿತಗೊಳಿಸಲು ಸುಪ್ರೀಂ ನಿರಾಕರಣೆ

ಹೊಸದಿಲ್ಲಿ, ಆ. 9: ಸ್ಪರ್ಧಾತ್ಮಕ ಕಾನೂನು ಉಲ್ಲಂಘನೆ ಆರೋಪದಲ್ಲಿ ಈ ಕಾಮರ್ಸ್ನ ದೈತ್ಯರಾದ ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ ವಿರುದ್ಧ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ)ದ ತನಿಖೆಯ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ. ತನಿಖೆಯನ್ನು ಸ್ಥಗಿತಗೊಳಿಸಬೇಕು ಎಂಬ ಕಂಪೆನಿಯ ಮನವಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ತನಿಖೆ ಮುಂದುವರಿಯಬೇಕು ಎಂದಿದೆ.
ನ್ಯಾಯಾಲಯದ ಆದೇಶದಂತೆ ತನಿಖೆಯಲ್ಲಿ ಪಾಲ್ಗೊಳ್ಳಲು ಈಗ ಇ-ಶಾಪಿಂಗ್ ಕಂಪೆನಿಗೆ ನಾಲ್ಕು ವಾರಗಳ ಕಾಲಾವಕಾಶ ಇದೆ. ತಮ್ಮ ಈ-ಕಾಮರ್ಸ್ ವೇದಿಕೆಯಲ್ಲಿ ಆಯ್ಕೆಯ ಮಾರಾಟಗಾರರಿಗೆ ಪ್ರೇರೇಪಿಸುವುದು ಹಾಗೂ ಸ್ಪರ್ಧೆ ತಡೆಯುವ ವ್ಯವಹಾರ ಅಭ್ಯಾಸಗಳನ್ನು ಬಳಸುವ ಆರೋಪದಲ್ಲಿ ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ ವಿರುದ್ಧ ಸಿಸಿಐ 2020ರಲ್ಲಿ ತನಿಖೆ ಆರಂಭಿಸಿತ್ತು. ಆದರೆ, ಈ ಆರೋಪವನ್ನು ಎರಡೂ ಕಂಪೆನಿಗಳು ನಿರಾಕರಿಸಿದ್ದವು. ಈ ಹಿಂದೆ ಅಮೆಜಾನ್ ಇಂಡಿಯಾ ಹಾಗೂ ಫ್ಲಿಪ್ಕಾರ್ಟ್ ತಮ್ಮ ವಿರುದ್ಧ ವಿಶ್ವಾಸ ದ್ರೋಹ ತನಿಖೆಯನ್ನು ಸ್ಥಗಿತೊಗೊಳಿಸುವಂತೆ ಕೋರಿ ಸಲ್ಲಿಸಿದ ಪ್ರತ್ಯೇಕ ಮನವಿಯನ್ನು ಜುಲೈ 23ರಂದು ಕರ್ನಾಟಕ ಉಚ್ಚ ನ್ಯಾಯಾಲಯ ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಈ ಕಂಪೆನಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ.





