ಎಸೆಸೆಲ್ಸಿ ಫಲಿತಾಂಶ ಪ್ರಕಟ: ದ.ಕ. ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ಪಾಸ್

ಮಂಗಳೂರು, ಆ.9: ಕೋವಿಡ್ 19 ಹಿನ್ನೆಲೆಯಲ್ಲಿ ಎಸೆಸೆಲ್ಸಿಯ ವಿಶೇಷ ಪರೀಕ್ಷೆ ಬರೆದ ದ.ಕ.ಜಿಲ್ಲೆಯ 32,657 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಆ ಪೈಕಿ 9 ವಿದ್ಯಾರ್ಥಿಗಳು 625ರಲ್ಲಿ 625 ಅಂಕ ಪಡೆದು ಗಮನ ಸೆಳೆದಿದ್ದಾರೆ.
ಕಠಿಣ ಪರಿಶ್ರಮಕ್ಕೆ ತಕ್ಕ ಫಲ
ನಾನು ಈ ಪರೀಕ್ಷೆಯನ್ನು ಲಘುವಾಗಿ ಪರಿಗಣಿಸದೆ ಕಠಿಣ ಪರಿಶ್ರಮಪಟ್ಟಿದ್ದೆ. ಅದಕ್ಕೆ ತಕ್ಕ ಫಲ ಸಿಕ್ಕಿದೆ. ತಂದೆ, ತಾಯಿಯ ಪ್ರೋತ್ಸಾಹ, ಶಿಕ್ಷಕ ವರ್ಗದ ಬೆಂಬಲ ಸದಾ ಇತ್ತು. ಹಾಗಾಗಿ ಒಳ್ಳೆಯ ಅಂಕಗಳಿಸುವ ವಿಶ್ವಾಸವೂ ಇತ್ತು. ಲಾಕ್‌ಡೌನ್ ಕಲಿಕೆಗೆ ತುಂಬಾ ಸಮಯವಕಾಶ ಸಿಕ್ಕಿತ್ತು. ಮುಂದೆ ಡೇಟಾ ಇಂಜಿನಿಯರಿಂಗ್ ಕೋರ್ಸ್ ಮಾಡಬೇಕೆಂದಿರುವೆ. -ಕೀರ್ತನಾ ಶೆಣೈ, ಉರ್ವ ಕೆನರಾ ಹೈಸ್ಕೂಲ್ ವಿದ್ಯಾರ್ಥಿನಿ
ಫುಲ್ ಮಾರ್ಕ್ ನಿರೀಕ್ಷಿಸಿರಲಿಲ್ಲ
ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಬೇಕು ಎಂಬ ಆಸೆಯಿಂದ ಕಷ್ಟಪಟ್ಟು ಓದಿದ್ದೆ. ಆದರೆ, 625ರಲ್ಲಿ 625 ಅಂಕ ಸಿಗಬಹುದು ಎಂಬ ನಿರೀಕ್ಷೆ ಇರಲಿಲ್ಲ. ಫಲಿತಾಂಶ ಬಂದ ಬಳಿಕ ತುಂಬಾ ಕುಷಿಯಾಯಿತು. ತಂದೆ, ತಾಯಿ, ಶಿಕ್ಷಕ ವರ್ಗದ ಸಹಕಾರ ಮರೆಯಲು ಸಾಧ್ಯವಿಲ್ಲ. ಆದರೆ ಅವರೆಂದೂ ಇಷ್ಟೇ ಅಂಕ ಪಡೆಯಬೇಕು ಎಂದು ಒತ್ತಡ ಹಾಕಿರಲಿಲ್ಲ. ಲಾಕ್‌ಡೌನ್ ಅವಧಿಯೂ ನನಗೆ ಕಲಿಕೆಗೆ ಹೆಚ್ಚು ಸಮಯ ಸಿಕ್ಕಂತಾಯಿತು. ಮುಂದೆ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡಬೇಕೆಂದಿರುವೆ. - ರಿತಿಕಾ, ಸಂತ ಜೆರೋಸಾ ಗರ್ಲ್ಸ್ ಹೈಸ್ಕೂಲ್, ಜೆಪ್ಪು, ಮಂಗಳೂರು.







