ರಸ್ತೆ ಅಭಿವೃದ್ಧಿಗಾಗಿ 7000 ಮರಗಳ ತೆರವು:ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಲು ಕ್ರಮ ಕೈಗೊಳ್ಳಿ; ಸಚಿವ ಸಿ.ಸಿ.ಪಾಟೀಲ್

ಬೆಂಗಳೂರು, ಆ.9: ಕೆಆರ್ಡ ಡಿಸಿಎಲ್ ವತಿಯಿಂದ ಬೆಂಗಳೂರು ಸುತ್ತಮುತ್ತಲಿನ ರಸ್ತೆ ಅಭಿವೃದ್ಧಿ ಕಾಮಗಾರಿಗಳಲ್ಲಿ ಸುಮಾರು 7000 ಮರಗಳನ್ನು ತೆರವುಗೊಳಿಸುವ ಸಂಬಂಧ ಹೈಕೋರ್ಟ್‍ನಲ್ಲಿ ಸಾರ್ವಜನಿಕ ರಿಟ್ ಅರ್ಜಿ ಸಲ್ಲಿಕೆಯಿಂದ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಲು ಶೀಘ್ರ ಕ್ರಮ ವಹಿಸಲು ಹಾಗೂ ಭೂಮಿಯು ಲಭ್ಯವಿರುವ ಭಾಗಗಳ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಸೂಚಿಸಿದರು.
ಸೋಮವಾರ ನಗರದಲ್ಲಿ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಎಸ್‍ಎಚ್‍ಡಿಪಿ ಫೇಸ್-4 ಹಂತ-2ರ ಕಾಮಗಾರಿಗಳಿಗೆ ಯೋಜನಾ ವರದಿ ತಯಾರಿಕೆ ಸಂಬಂಧ ಸ್ವೀಕೃತವಾಗಿರುವ ಗುತ್ತಿಗೆಯನ್ನು ಶೀಘ್ರವಾಗಿ ಅಂತಿಮಗೊಳಿಸಲು ಕ್ರಮ ವಹಿಸುವಂತೆ ಸೂಚಿಸಿದರು.
ಗುಣ ಭರವಸೆ ವಲಯದ ಅಧಿಕಾರಿಗಳು ಹೆಚ್ಚಿನ ಕಾಮಗಾರಿಗಳ ಪರಿವೀಕ್ಷಣೆ ನಡೆಸಿ, ಇಲಾಖೆಯಲ್ಲಿ ಅನುಷ್ಠಾನಗೊಳಿಸುತ್ತಿರುವ ಎಲ್ಲ ಯೋಜನೆಗಳ ಗುಣಮಟ್ಟವನ್ನು ಉತ್ತಮ ಪಡಿಸಲು ಕ್ರಮ ವಹಿಸುವಂತೆ ಹಾಗೂ ಕಾಮಗಾರಿಗಳು ಪೂರ್ಣಗೊಂಡ ನಂತರ ಉತ್ತಮ ಗುಣಮಟ್ಟವನ್ನು ಖಾತ್ರಿಪಡಿಸಿಕೊಂಡ ನಂತರವೇ ಅಗತ್ಯ ಎನ್‍ಒಸಿ ನೀಡಲು ಅವರು ಸೂಚಿಸಿದರು.
ಪಿಆರ್‍ಎಎಂಸಿ ವತಿಯಿಂದ ರಸ್ತೆ ಸುರಕ್ಷತೆ ಕಾಮಗಾರಿಗಳು ಮತ್ತು ಕಪ್ಪುಸ್ಥಳ ನಿವಾರಣೆ ಕಾಮಗಾರಿಗಳ ಕ್ರಿಯಾ ಯೋಜನೆಯಲ್ಲಿ ಪ್ರಮುಖ ಹೆದ್ದಾರಿಗಳನ್ನು ಸಂಪರ್ಕಿಸುವ ರಸ್ತೆಗಳ ಜಂಕ್ಷನ್ ಗಳ ಅಭಿವೃದ್ಧಿಯನ್ನು ಆದ್ಯತೆ ಮೇಲೆ ಕೈಗೊಂಡು ಅಪಘಾತಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ಸಿ.ಸಿ.ಪಾಟೀಲ್ ಹೇಳಿದರು.
ರಾಜ್ಯದಲ್ಲಿ ಕಳೆದ 3 ವರ್ಷಗಳಿಂದ ಹೆಚ್ಚಿನ ಮಳೆಯಿಂದ ಇಲಾಖೆಯ ಬಹಳಷ್ಟು ರಸ್ತೆ, ಸೇತುವೆಗಳು ಹಾನಿಗೊಳಗಾಗಿದ್ದು, ಇವುಗಳ ದುರಸ್ತಿ/ಪುನರ್ ನಿರ್ಮಾಣ ಕಾಮಗಾರಿಗಳನ್ನು ಸಮರೋಪಾದಿಯಲ್ಲಿ ಕೈಗೊಂಡು ಉತ್ತಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಹಾಗೂ ಈ ಕಾಮಗಾರಿಗಳ ಅನುಷ್ಠಾ ನವನ್ನು ಲಭ್ಯವಿರುವ ಅನುದಾನದಲ್ಲಿ ಉತ್ತಮ ಯೋಜನೆ ರೂಪಿಸಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಅವರು ತಿಳಿಸಿದರು.
ರಾಜ್ಯದ ಒಟ್ಟಾರೆ ಆಯವ್ಯದ ಗಾತ್ರದಲ್ಲಿ ಹೆಚ್ಚಳವಾಗಿದ್ದರೂ ಲೋಕೋಪಯೋಗಿ ಇಲಾಖೆಯ ಆಯವ್ಯಯದಲ್ಲಿ ಈ ಸಮಾನಾಂತರ ಹೆಚ್ಚಳವಾಗಿರುವುದಿಲ್ಲ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ನೀಡಿದ ಮಾಹಿತಿಯನ್ನು ಆಲಿಸಿದ ಸಿ.ಸಿ.ಪಾಟೀಲ್, ಕಳೆದ 5 ವರ್ಷಗಳ ಡೇಟಾ ವಿವರಗಳನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇಲಾಖೆಯು ನಿರ್ಮಿಸುತ್ತಿರುವ ಶಾಲಾ ಕಟ್ಟಡಗಳ ಬಗ್ಗೆಯೂ ಚರ್ಚಿಸಿದ ಲೋಕೋಪಯೋಗಿ ಸಚಿವರು, ರಾಜ್ಯವ್ಯಾಪಿ ಶಾಲಾ ಕಟ್ಟಡಗಳ ನಕ್ಷೆಗಳನ್ನು ಸ್ಟಾಂಡರೈಸ್ಡ್ ಮಾಡುವಂತೆ ಸೂಚಿಸಿದರು.
ಸಭೆ ಮುಗಿದ ನಂತರ ಮಾನ್ಯ ಲೋಕೋಪಯೋಗಿ ಸಚಿವರು, ಅಧಿಕಾರಿಗಳಿಗೆ ಈ ಮೇಲ್ಕಂಡ ಕಾಮಗಾರಿಗಳನ್ನು ಆಧ್ಯತೆಯ ಮೇರೆಗೆ ಕೈಗೊಳ್ಳುವಂತೆ ಸೂಚಿಸುವುದರ ಜೊತೆಗೆ ಮುಖ್ಯಮಂತ್ರಿ ಹಾಗೂ ಕೇಂದ್ರದ ವರಿಷ್ಟರು ಲೋಕೋಪಯೋಗಿ ಇಲಾಖೆಯ ಗುರುತರ ಇಲಾಖೆಯ ಜವಾಬ್ದಾರಿಯನ್ನು ವಹಿಸಿದ್ದು, ಇಲಾಖೆಯ ಎಲ್ಲ ಮಟ್ಟದ ಅಧಿಕಾರಿಗಳು ರಾಜ್ಯ ಸರಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಗುಣಮಟ್ಟದ ರಸ್ತೆ, ಸೇತುವೆ ಮತ್ತು ಕಟ್ಟಡಗಳ ನಿರ್ಮಾಣವನ್ನು ಕೈಗೊಳ್ಳಲು ಹಾಗೂ ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಅಲ್ಲದೇ ಲೋಕೋಪಯೋಗಿ ಇಲಾಖೆಯಲ್ಲಿ ಶಾಸಕರು ಹಾಗೂ ಜನಪ್ರತಿನಿಧಿಗಳೊಂದಿಗೆ ಗೌರವದಿಂದ ವರ್ತಿಸಲು ಹಾಗೂ ಪ್ರಸ್ತಾಪಿಸುವ ಕೋರಿಕೆಗಳನ್ನು / ಕಾಮಗಾರಿಗಳನ್ನು ಕಾರ್ಯರೂಪಕ್ಕೆ ತರಲು ಆದ್ಯತೆ ನೀಡಬೇಕೆಂದು ಮತ್ತು ಕೇಂದ್ರ ಸರಕಾರದಿಂದ ಅನುಮೋದನೆಯಾಗಿರುವ ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಅವರು ಸೂಚಿಸಿದರು.
ಕೇಂದ್ರ ಸರಕಾರದ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿಯವರ ಸಹಕಾರದೊಂದಿಗೆ ಕೇಂದ್ರ ಸರಕಾರದಲ್ಲಿ ಬಾಕಿ ಇರುವ ರಾಜ್ಯದ ವಿವಿಧ ಯೋಜನೆಗಳಿಗೆ ಅನುಮೋದನೆ ಪಡೆಯುವ ನಿಟ್ಟಿನಲ್ಲಿ ಅನುಮೋದನೆಗೆ ಬಾಕಿ ಇರುವ ಹಾಗೂ ಅನುಮೋದನೆಗೆ ಸಲ್ಲಿಸಬೇಕಿರುವ ವಿವರಗಳನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಹಾಗೂ ಇಲಾಖೆಯ ವಿವಿಧ ಯೋಜನೆಗಳು ರಾಜ್ಯದ ಎಲ್ಲ ಭಾಗಗಳಲ್ಲಿ ಸಮಾನಾಂತರವಾಗಿ ಅನುಷ್ಠಾನಗೊಳ್ಳವ ರೀತಿಯಲ್ಲಿ ಕ್ರಿಯಾ ಯೋಜನೆಗಳನ್ನು ತಯಾರಿಸುವಂತೆ ಮತ್ತು ಇಲಾಖೆ ವತಿಯಿಂದ ಜನಪರ ಕೆಲಸಗಳನ್ನು ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಅವರು ಸೂಚಿಸಿದರು.







