ಚಿನ್ನದ ಪದಕ ವಿಜೇತೆ ಜಾವೆಲಿನ್ ಎಸೆತಗಾರ್ತಿ ರಝಿಯಾ ಶೇಖ್ರನ್ನು ಮರೆತ ಭಾರತ!
photo : timesofindia
ವಡೋದರ: ಟೋಕಿಯೊ ಒಲಿಂಪಿಕ್ಸ್ನಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾರ ಚಿನ್ನದ ಸಾಧನೆಯನ್ನು ಇಂದು ಭಾರತ ಸಂಭ್ರಮಿಸುತ್ತಿದೆ. ಆದರೆ ದುರದೃಷ್ಟವಶಾತ್ ನಾಲ್ಕು ದಶಕಗಳ ಹಿಂದೆ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಎರಡೂ ಮಟ್ಟದಲ್ಲಿ ಚಿನ್ನದ ಸಾಧನೆಯನ್ನು ಮಾಡಿರುವ ಇನ್ನೋರ್ವ ಜಾವೆಲಿನ್ ಎಸೆತದ ಕ್ರೀಡಾಪಟುವನ್ನು ದೇಶ ಮರೆತಿದೆ ಎಂದು Times of India ವರದಿ ಮಾಡಿದೆ.
ಗುಜರಾತ್ನ ವಡೋದರದ ಜಾವೆಲಿನ್ ಎಸೆತಗಾರ್ತಿ ರಝಿಯಾ ಶೇಖ್ ಇಂದು ಅಜ್ಞಾತ ಬದುಕು ಸಾಗಿಸುತ್ತಿದ್ದಾರೆ. ತನ್ನ ದೈನಂದಿನ ಅಗತ್ಯಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಅವರು ಹೋರಾಡುತ್ತಿದ್ದಾರೆ.
‘‘ಜಾವೆಲಿನ್ ಎಸೆತದಲ್ಲಿ ನೀರಜ್ ಚಿನ್ನದ ಪದಕ ಗೆದ್ದಿದ್ದಾರೆ ಎನ್ನುವುದನ್ನು ಕೇಳಿ ನನಗೆ ಕಣ್ಣೀರು ಬಂತು. ಈ ಕ್ರೀಡೆಯು ನನ್ನ ಹೃದಯಕ್ಕೆ ಅಷ್ಟೊಂದು ಹತ್ತಿರವಾಗಿದೆ’’ ಎಂದು 62 ವರ್ಷದ ರಝಿಯಾ ಹೇಳಿದರು.
1987ರ ದಕ್ಷಿಣ ಏಶ್ಯ ಫೆಡರೇಶನ್ ಗೇಮ್ಸ್ನಲ್ಲಿ ಈಟಿಯನ್ನು 50 ಮೀಟರ್ಗಿಂತ ದೂರ ಎಸೆದ ಮೊದಲ ಭಾರತೀಯ ಮಹಿಳೆ ಅವರಾಗಿದ್ದರು. ರಾಷ್ಟ್ರೀಯ ಜಾವೆಲಿನ್ ಥ್ರೋ ಪಂದ್ಯಾವಳಿಗಳಲ್ಲೂ ಅವರ ನಿರ್ವಹಣೆ ಅಪ್ರತಿಮವಾಗಿತ್ತು.
‘‘ಚೋಪ್ರಾ ಪಡೆಯುತ್ತಿರುವ ಎಲ್ಲ ಪ್ರಶಂಸೆಗಳು ಮತ್ತು ನಗದು ಪುರಸ್ಕಾರಗಳನ್ನು ನೋಡಿ ಖುಷಿಯಾಗುತ್ತಿದೆ. ಇದು ಹೆಚ್ಚಿನ ಯುವಜನರು ಕ್ರೀಡೆಯನ್ನು ವೃತ್ತಿಪರವಾಗಿ ತೆಗೆದುಕೊಳ್ಳಲು ಪ್ರೇರೇಪಿಸುತ್ತದೆ ಎಂದು ನಾನು ಭಾವಿಸುತ್ತೇನೆ’’ ಎಂದು ಅವರು ಹೇಳಿದರು.
‘‘ಅವರಿಗೆ ಹರ್ಯಾಣ ಸರಕಾರ ಎಲ್ಲ ನೆರವನ್ನು ನೀಡುತ್ತಿದೆ. ಆದರೆ ದುರದೃಷ್ಟವಶಾತ್ ನಮ್ಮ ರಾಜ್ಯ ಸರಕಾರ ತನ್ನ ಕ್ರೀಡಾ ಪ್ರತಿಭೆಗಳನ್ನು ಹೆಚ್ಚಾಗಿ ಗುರುತಿಸುವುದಿಲ್ಲ’’ ಎಂದರು.
ರಝಿಯಾ ರೈಲ್ವೆಯ ಪಿಂಚಣಿಯಿಂದ ಜೀವನ ಸಾಗಿಸುತ್ತಿದ್ದಾರೆ.
‘‘ನನಗೆ ಸರ್ದಾರ್ ಪಟೇಲ್ ಪ್ರಶಸ್ತಿಯನ್ನು ನೀಡಲಾಗಿದೆ, ಆದರೆ ಅದಕ್ಕಿಂತ ಹೆಚ್ಚು ನನಗೆ ಬೇರೇನೂ ಸಿಕ್ಕಿಲ್ಲ’’ ಎಂದರು.
ಅವರು ಅಂತರ್ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಎರಡು ಚಿನ್ನ ಸೇರಿದಂತೆ ಒಂಭತ್ತು ಪದಕಗಳನ್ನು ಗೆದ್ದಿದ್ದಾರೆ.
‘‘ನನಗೆ ರೈಲ್ವೆಯು ಉದ್ಯೋಗ ನೀಡಿತು. ಆದರೆ ಕೆಲಸದ ರಾಜಕೀಯದ ಕಾರಣಕ್ಕಾಗಿ ನಾನು 2003ರಲ್ಲಿ ಅದನ್ನು ತೊರೆದೆ. ಬಳಿಕ ನಾನು ಶಾಲೆಗಳಲ್ಲಿ ಅರೆಕಾಲಿಕ ಕೆಲಸಗಳನ್ನು ಮಾಡಿದೆ’’ ಎಂದರು.