ಅಗತ್ಯ ರಕ್ಷಣಾ ಸೇವೆಗಳ ಕಾಯಿದೆ-2021 ವಿರೋಧಿಸಿ ಪ್ರತಿಭಟನೆ

ಬೆಂಗಳೂರು, ಆ.9: ದೇಶದಲ್ಲಿಂದು ಖಾಸಗೀಕರಣದ ಸುದ್ದಿ ಬಹಳಷ್ಟು ಜೋರಾಗಿ ಕೇಳಿ ಬರುತ್ತಿದೆ. ಯಾವುದೇ ಚರ್ಚೆಗಳಿಲ್ಲದೆ ಸರಕಾರ ಹಲವು ಕಾಯ್ದೆಗಳನ್ನು ಜಾರಿಗೆ ತರುತ್ತಿರುವುದರ ವಿರುದ್ಧ ದೇಶದಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ.
ಬಂಡವಾಳಶಾಹಿಗಳಿಗೆ ಸರಕಾರ ಮಣೆ ಹಾಕುತ್ತಿದೆ ಎಂಬ ಆರೋಪದ ಮಧ್ಯೆಯೇ ಮತ್ತೊಂದು ಅಗತ್ಯ ರಕ್ಷಣಾ ಸೇವೆಗಳ ಕಾಯಿದೆ-2021ನ್ನು ಸರಕಾರ ಜಾರಿಗೊಳಿಸಿದೆ. ಇದು ಭೂಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಮಿಕರ ಪಾಲಿಗೆ ಕರಾಳ ಮತ್ತು ಅವರ ಹಕ್ಕುಗಳನ್ನು ಕಸಿಯುವ ಕಾಯ್ದೆ ಎಂದು ಭೂಸೇನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ಹೇಳಿದ್ದಾರೆ.
ಸರಕಾರದ ಜನವಿರೋಧಿ ಕಾಯ್ದೆ ವಿರೋಧಿಸಿ ಆಲ್ ಇಂಡಿಯಾ ಡಿಫೆನ್ಸ್ ಫೆಡರೇಶನ್ ಅಖಿಲ ಭಾರತ ಮಟ್ಟದಲ್ಲಿ ಕರೆ ನೀಡುವ "ದಿಕ್ಕಾರ ದಿವಸ"ದ ಅಂಗವಾಗಿ ಬೆಂಗಳೂರಿನ ಹಲಸೂರಿನಲ್ಲಿರುವ 515 ಆರ್ಮಿ ವರ್ಕ್ ಶಾಪ್ ಮುಂದೆ ಭೂಸೇನಾ ಕಾರ್ಯಾಗಾರ ಕಾರ್ಮಿಕ ಸಂಘದ ಕಾರ್ಮಿಕರು 'ಇದು ಭಾರತೀಯ ಪ್ರಜಾಪ್ರಭುತ್ವದ ಮೇಲಿನ ಕರಾಳ ದಿನ' ಧಿಕ್ಕಾರ ದಿನವೆಂದು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ತಕ್ಷಣ ಕಾಯ್ದೆಯನ್ನು ಮತ್ತು ಗೋಕೋವನ್ನು ಕೈ ಬಿಡುವಂತೆ ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಆಲ್ ಇಂಡಿಯಾ ಡಿಫೆನ್ಸ್ ವರ್ಕರ್ಸ್ ಅಧ್ಯಕ್ಷ ತಿರುಕುಮಾರ್, 515 ಭೂಸೇನಾ ಕಾರ್ಯಾಗಾರ ಕಾರ್ಮಿಕ ಸಂಘದ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಭಗತ್ ಭಿಶ್ಕ್, ಉಪಾಧ್ಯಕ್ಷ ಸಮೀವುಲ್ಲಾ ಖಾನ್, ರಾಜಶೇಖರ್ ಔರಾತ್ಕಾರ್, ಪದಾಧಿಕಾರಿಗಳಾದ ಕೃಷ್ಣ ಕುಮಾರ್, ಕೃಷ್ಣೇ ಗೌಡ, ಆದಿತ್ಯ ಮತ್ತಿತರು ಉಪಸ್ಥಿತರಿದ್ದರು.







