ಶಾಸಕ ಎನ್. ಮಹೇಶ್ ವಿರುದ್ಧ ಪ್ರತಿಭಟನೆಗೆ ಮುಂದಾದ ದಲಿತ ಸಂಘಟನೆಗಳ ಒಕ್ಕೂಟ: ರಾಜೀನಾಮೆಗೆ ಒತ್ತಾಯ

ಚಾಮರಾಜನಗರ: ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಬಿಜೆಪಿಗೆ ಸೇರ್ಪಡೆಗೊಂಡ ನಂತರ ಸಾಕಷ್ಟು ಟೀಕೆ, ವಿರೋಧ ವ್ಯಕ್ತವಾಗುತ್ತಿದ್ದು ದಲಿತ, ಪ್ರಗತಿಪರ ಸಂಘಟನೆಗಳು ಇದೇ 12 ಕ್ಕೆ ಪ್ರತಿಭಟನೆ ನಡೆಸಿ ರಾಜೀನಾಮೆ ಕೊಡುವಂತೆ ಒತ್ತಾಯಿಸಲು ಮುಂದಾಗಿವೆ.
ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿ ದಲಿತ ಹೋರಾಟಗಾರ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, ಕಳೆದ 20 ವರ್ಷಗಳಿಂದ ಅಂಬೇಡ್ಕರ್ ಸಿದ್ಧಾಂತ ಪ್ರತಿಪಾದಿಸಿ ಈಗ ಮನುವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಖಂಡನೀಯ, ನಂಬಿಕೆ ದ್ರೋಹ ಎಸಗಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಬಿಜೆಪಿಯನ್ನು ನಾಶ ಮಾಡುವುದೇ ತನ್ನ ಗುರಿ ಎಂದು ಭಾಷಣಗಳನ್ನು ಮಾಡಿ ಈಗ ಅದೇ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಮತದಾರರನ್ನು ಮೂರ್ಖರನ್ನಾಗಿಸಿದ್ದಾರೆ. ಆನೆ ಗುರತಲ್ಲಿ ಗೆದ್ದು ಈಗ ಕಮಲ ಹಿಡಿದಿರುವುದರಿಂದ ಮನುಷ್ಯತ್ವ, ನೈತಿಕತೆ ಇದ್ದರೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಯಿಂದ ಆಯ್ಕೆಯಾಗಿ ಬರಲಿ ಎಂದು ಅವರು ಒತ್ತಾಯಿಸಿದರು.
ಒಂದು ವೇಳೆ ಬಿಜೆಪಿಯಿಂದ ಅವರು ಪುನರಾಯ್ಕೆಯಾದರೇ ಜನರು ಅವರನ್ನು ಒಪ್ಪಿದ್ದಾರೆ ಎಂದರ್ಥ. ಅಲ್ಲಿಯ ತನಕವೂ ನಮ್ಮ ಪ್ರಕಾರ ಅನರ್ಹರು. ಶಾಸಕ ಮಹೇಶ್ ರಾಜೀನಾಮೆ ನೀಡುವ ತನಕ ದಲಿತ ಒಕ್ಕೂಟವು ಹಂತ-ಹಂತವಾಗಿ ಪ್ರತಿಭಟನೆ ನಡೆಸಲಿದ್ದು ನಮ್ಮ ಹೋರಾಟ ನಿರಂತರ ಎಂದು ಎಚ್ಚರಿಸಿದ್ದಾರೆ.







