ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಿ: ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಒತ್ತಾಯ

ಶಿವಮೊಗ್ಗ, ಆ.10: ಶಾಂತಿ ಸುವ್ಯವಸ್ಥೆ ಕದಡುವಂತಹ ಕಿಡಿಗೇಡಿ ಹೇಳಿಕೆ ನೀಡಲು ಆರಂಭಿಸಿರುವ ಕೆ ಎಸ್ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಬಿಜೆಪಿ ಕಾರ್ಯಕರ್ತರನ್ನು ಹೊಡೆದಾಟಕ್ಕೆ ಪ್ರಚೋದಿಸುವ ಹೇಳಿಕೆಯನ್ನು ಈಶ್ವರಪ್ಪನವರು ನೀಡಿರುವುದು ಖಂಡನೀಯ. ಬಿಜೆಪಿಯದೆ ಸರ್ಕಾರವಿದೆ.ಬಿಜೆಪಿ ಕಾರ್ಯಕರ್ತರು ಸೇರಿದಂತೆ ಯಾವುದೇ ಪಕ್ಷದ ಕಾರ್ಯಕರ್ತರಿರಲಿ ಜನಸಾಮಾನ್ಯರೇ ಇರಲಿ ಹಲ್ಲೆ ದೌರ್ಜನ್ಯಕ್ಕೆ ಒಳಗಾದರೆ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಲಿ.ಆ ಕೆಲಸ ಮಾಡುವುದು ಬಿಟ್ಟು ಹೊಡೆಯಿರಿ,ಬಡಿಯಿರಿ,ತಿರುಗೇಟು ನೀಡಿರಿ ಎಂದೆಲ್ಲ ಹೇಳಿಕೆ ನೀಡುವುದು ಕಾನೂನು ಬಾಹಿರ ಕೃತ್ಯವಲ್ಲದೆ ಬೇರೇನು ಅಲ್ಲ. ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡವರು ಮಾತ್ರ ಇಂತಹ ಹೇಳಿಕೆ ನೀಡಬಲ್ಲರು.ಕಾನೂನು ಸುವ್ಯವಸ್ಥೆ ಹದಗೆಡಿಸುವಂತಹ ಹೇಳಿಕೆ ಇದಾಗಿದ್ದು,ಸಚಿವರೇ ಹೀಗೆ ಮಾತನಾಡುವುದು ಹೊಸ ಸರ್ಕಾರದ ಅಪಾಯಕಾರಿ ನಡೆಯನ್ನು ಸೂಚಿಸುತ್ತದೆ.ಆದ್ದರಿಂದ ಕೂಡಲೇ ಈಶ್ವರಪ್ಪನವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ರಾಗದ್ವೇಷಗಳಿಲ್ಲದೆ ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸುವುದಾಗಿ ಪ್ರಮಾಣವಚನ ಸ್ವೀಕರಿಸಿದ ಒಂದು ವಾರದೊಳಗೆ ಅದನ್ನೆಲ್ಲ ಮರೆತು ತಮ್ಮ ಪಕ್ಷದ ಕಾರ್ಯಕರ್ತರನ್ನು ಗುಂಡಾಗಿರಿಗೆ ಪ್ರಚೋದಿಸುತ್ತಿರುವುದು ಅಸಭ್ಯತೆಯ ಪರಮಾವಧಿಯಾಗಿದೆ.ಜಿಲ್ಲೆಯವರೇ ಆದ ಗೃಹ ಸಚಿವರು ತಮ್ಮ ಪಕ್ಷದ ಕಾರ್ಯಕರ್ತರ ಹಿತವನ್ನು ಕಾನೂನು ಬದ್ಧವಾಗಿ ಕಾಪಾಡಬಲ್ಲವರೆಂಬ ನಂಬಿಕೆಯೂ ಈಶ್ವರಪ್ಪನವರಿಗೆ ಇಲ್ಲದೆ ಹೋಗಿರುವುದು ದುರಂತದ ಸಂಗತಿಯಾಗಿದೆ.
ಮಾಜಿ ಸಚಿವರುಗಳಾದ ರೋಷನ್ ಬೇಗ್ ಮತ್ತು ಜಮೀರ್ ಅಹಮದ್ ಅವರ ಮನೆಗಳ ಮೇಲೆ ಇಡಿ ದಾಳಿ ನಡೆಸಿರುವುದನ್ನು ಬಡವರ ದುಡ್ಡು ಹೊಡೆದಿದ್ದಕ್ಕೆ ಹೀಗಾಯಿತು ಎಂಬುದಾಗಿ ಈಶ್ವರಪ್ಪ ನಗೆಪಾಟಲಿನ ಹೇಳಿಕೆ ನೀಡಿದ್ದಾರೆ.ಹಿಂದೆ ಈಶ್ವರಪ್ಪ ಸೇರಿದಂತೆ ಬಿಜೆಪಿ ಮುಖಂಡರ ಮನೆಗಳ ಮೇಲೆಲ್ಲ ಇವರದೇ ಸರ್ಕಾರವಿದ್ದಾಗ ಲೋಕಾಯುಕ್ತ ಸೇರಿದಂತೆ ಹಲವು ಸಾಂವಿಧಾನಿಕ ಸಂಸ್ಥೆಗಳು ಧಾಳಿ ನೀಡಿಸಿದ್ದನ್ನು ಇವರು ಮರೆತರಾ.ಇವರು ಬಡ ಹಿಂದುಗಳ ದುಡ್ಡು ಹೊಡೆದಿದ್ದಕ್ಕೆ ಇವರುಗಳ ಮನೆ ಮೇಲೆ ರೈಡ್ ಗಳು ಆಗಿದ್ದವಾ.ಈಶ್ವರಪ್ಪನವರು ಈ ಬಗ್ಗೆ ಸಾರ್ವಜನಿಕವಾಗಿ ನೆನಪು ಮಾಡಿಕೊಳ್ಳುವುದು ಒಳಿತು ಎಂದು ಅವರು ಹೇಳಿದ್ದಾರೆ.







