2019-20ರಲ್ಲಿ ಶೇ.76ರಷ್ಟು ಚುನಾವಣಾ ಬಾಂಡ್ ಗಳು ಬಿಜೆಪಿ ಮಡಿಲಿಗೆ, ಕಾಂಗ್ರೆಸ್ ಗೆ ದಕ್ಕಿದ್ದು ಕೇವಲ 9%

ಹೊಸದಿಲ್ಲಿ, ಆ.10: 2019-20ನೇ ಹಣಕಾಸು ವರ್ಷದಲ್ಲಿ ಮಾರಾಟವಾದ ಚುನಾವಣಾ ಬಾಂಡ್ ಗಳ ಪೈಕಿ ಶೇ.76ರಷ್ಟನ್ನು ಬಿಜೆಪಿ ಸ್ವೀಕರಿಸಿದ್ದರೆ, ಕಾಂಗ್ರೆಸ್ಗೆ ಕೇವಲ ಶೇ.9ರಷ್ಟು ಪಾಲು ದಕ್ಕಿದೆ ಎಂದು ಚುನಾವಣಾ ಆಯೋಗದ ದತ್ತಾಂಶವನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಚುನಾವಣಾ ಬಾಂಡ್ ಗಳ ಒಟ್ಟು ಮೌಲ್ಯ 3,355 ರೂ.ಗಳಾಗಿದ್ದು,ಈ ಪೈಕಿ 2,555 ಕೋ.ರೂ.ಗಳು ಬಿಜೆಪಿಗೆ ಲಭಿಸಿವೆ. ಇದು ಕಳೆದ ವರ್ಷ ಅದು ಸ್ವೀಕರಿಸಿದ್ದ 1,450 ಕೋ.ರೂ.ಗಳಿಗೆ ಹೋಲಿಸಿದರೆ ಶೇ.75ರಷ್ಟು ಏರಿಕೆಯಾಗಿದೆ. 2019-20ರಲ್ಲಿ ಕಾಂಗ್ರೆಸ್ಗೆ 318 ಕೋ.ರೂ.ಗಳು ಲಭಿಸಿದ್ದು,ಕಳೆದ ವರ್ಷದ 383 ಕೋ.ರೂ.ಗಳಿಗೆ ಹೋಲಿಸಿದರೆ ಶೇ.17ರಷ್ಟು ಇಳಿಕೆಯಾಗಿದೆ.
ಚುನಾವಣಾ ಬಾಂಡ್ ಗಳ ಮೂಲಕ ಟಿಎಂಸಿ 100.46 ಕೋ.ರೂ.,ಎನ್ಸಿಪಿ 29.25 ಕೋ.ರೂ.,ಶಿವಸೇನೆ 41 ಕೋ.ರೂ., ಡಿಎಂಕೆ 45 ಕೋ.ರೂ.,ಆರ್ಜೆಡಿ 2.5 ಕೋ.ರೂ. ಮತ್ತು ಆಪ್ 18 ಕೋ.ರೂ.ಗಳನ್ನು ಗಳಿಸಿವೆ.
2020, ಮಾರ್ಚ್ ನಲ್ಲಿ ಚುನಾವಣಾ ಬಾಂಡ್ ಗಳು ಅಸ್ತಿತ್ವಕ್ಕೆ ಬಂದಾಗಿನಿಂದ ಬಿಜೆಪಿಯೊಂದೇ ಶೇ.68ರಷ್ಟು ಬಾಂಡ್ ಗಳನ್ನು ಸ್ವೀಕರಿಸಿದೆ. ಬಾಂಡ್ ಗಳು ಬರುವುದಕ್ಕೆ ಎಷ್ಟೋ ಮೊದಲೇ ಬಿಜೆಪಿಯು ರಾಜಕೀಯ ಪಕ್ಷಗಳಲ್ಲಿಯೇ ಅತ್ಯಂತ ಹೆಚ್ಚಿನ ಆದಾಯವನ್ನು ಹೊಂದಿತ್ತು ಎಂದು ವರದಿಯು ತಿಳಿಸಿದೆ.
ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಹಣಕಾಸು ಸಾಧನವಾಗಿರುವ ಚುನಾವಣಾ ಬಾಂಡ್ ಗಳನ್ನು ಎಸ್ಬಿಐ ಮೂಲಕ ಪ್ರತಿ ತ್ರೈಮಾಸಿಕದ ಆರಂಭದ 10 ದಿನಗಳಲ್ಲಿ ಮಾರಾಟ ಮಾಡಲಾಗುತ್ತದೆ. ಲೋಕಸಭಾ ಚುನಾವಣೆಗಳು ನಡೆಯುವ ವರ್ಷದಲ್ಲಿ ಅವಧಿಯನ್ನು 30 ದಿನಗಳಿಗೆ ವಿಸ್ತರಿಸಲಾಗುತ್ತದೆ. ಈ ವರ್ಷದ ಜನವರಿಯ ಮೊದಲ ಹತ್ತು ದಿನಗಳಲ್ಲಿ ಮಾರಾಟವಾಗಿದ್ದ ಚುನಾವಣಾ ಬಾಂಡ್ ಗಳ 16 ಪಟ್ಟು ಬಾಂಡ್ ಗಳು ಎಪ್ರಿಲ್ ನಲ್ಲಿ ವಿಧಾನಸಭಾ ಚುನಾವಣೆಗಳ ಸಂದರ್ಭ ಮಾರಾಟವಾಗಿದ್ದವು.







