ಕುಸ್ತಿಪಟು ವಿನೇಶ್ ಫೋಗಟ್ ತಾತ್ಕಾಲಿಕ ಅಮಾನತು

ಹೊಸದಿಲ್ಲಿ:ಟೋಕಿಯೊ ಒಲಿಂಪಿಕ್ಸ್ ವೇಳೆ ಅಶಿಸ್ತು ತೋರಿದ್ದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಭಾರತ ಕುಸ್ತಿ ಫೆಡರೇಶನ್ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.
ಅನುಚಿತ ವರ್ತನೆ ತೋರಿದ್ದ ಇನ್ನೋರ್ವ ಕುಸ್ತಿ ಪಟು ಸೋನಮ್ ಮಲಿಕ್ ಗೆ ಮಂಗಳವಾರ ನೋಟಿಸ್ ನೀಡಲಾಗಿದೆ.
ಒಲಿಂಪಿಕ್ಸ್ ಗೂ ಮೊದಲು ಕೋಚ್ ವೂಲರ್ ಅಕೋಶ್ ಬಳಿ ಹಂಗೇರಿಯಲ್ಲಿ ತರಬೇತಿ ಪಡೆದಿದ್ದ ವಿನೇಶ್ ಅಲ್ಲಿಂದ ನೇರವಾಗಿ ಟೋಕಿಯೊಗೆ ಪ್ರಯಾಣಿಸಿದ್ದರು. ಕ್ರೀಡಾಗ್ರಾಮದಲ್ಲಿ ಉಳಿದುಕೊಳ್ಳಲು ತಗಾದೆ ತೆಗೆದಿದ್ದ ಅವರು ಭಾರತದ ಇತರ ಕುಸ್ತಿಪಟುಗಳ ಜೊತೆಯಲ್ಲಿ ಅಭ್ಯಾಸ ನಡೆಸಲು ನಿರಾಕರಿಸಿದ್ದರು.
ಒಲಿಂಪಿಕ್ಸ್ ನಲ್ಲಿ ಪಾಲ್ಗೊಂಡ ಭಾರತ ತಂಡಕ್ಕೆ ಶಿವ್ ನರೇಶ್ ಸಂಸ್ಥೆ ಪ್ರಾಯೋಜಕತ್ವ ನೀಡಿತ್ತು. ಕ್ರೀಡಾಪಟುಗಳು ಸ್ಪರ್ಧೆಯ ವೇಳೆ ಶಿವ್ ನರೇಶ್ ಲಾಂಛನವಿರುವ ಪೋಷಾಕು ಧರಿಸುವಂತೆ ಸೂಚಿಸಲಾಗಿತ್ತು. ಇದನ್ನು ಧಿಕ್ಕರಿಸಿದ್ದ ವಿನೇಶ್ ನೈಕ್ ಸಂಸ್ಥೆಯ ಲಾಂಛನ ವಿರುವ ಪೋಷಾಕು ತೊಟ್ಟಿದ್ದರು. ಹೀಗಾಗಿ ಅವರಿಗೆ ನೋಟಿಸ್ ನೀಡಲಾಗಿದೆ. ಅ.16ರೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ .
ಒಲಿಂಪಿಕ್ಸ್ ಗೆ ತೆರಳುವ ಮೊದಲು ಸೋನಮ್ ಅಥವಾ ಅವರ ಕುಟುಂಬದವರು ಡಬ್ಲ್ಯು ಎಫ್ ಐ ಕಚೇರಿಗೆ ತೆರಳಿ ಪಾಸ್ ಪೋರ್ಟ್ ಪಡೆಯಬೇಕಿತ್ತು. ಆದರೆ ಅವರು ತಮ್ಮ ಪರವಾಗಿ ಪಾಸ್ ಪೋರ್ಟ್ ಪಡೆದುಕೊಳ್ಳುವಂತೆ ಸಾಯ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಅವರ ವರ್ತನೆ ಸಹಿಸುವುದಕ್ಕೆ ಆಗುವುದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.