ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಕೆಆರ್‌ಎಸ್ ಪಕ್ಷದಿಂದ ಸಹಾಯವಾಣಿ
ಉಡುಪಿ, ಆ.10: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಭ್ರಷ್ಟಾಚಾರ ಮುಕ್ತ ಮತ್ತು ಜನಸ್ನೇಹಿ ಆಡಳಿತವನ್ನು ಸ್ಥಾಪಿಸುವ ಉದ್ದೇಶದಿಂದ ಪಕ್ಷ ಸಂಘಟಿಸಿದ್ದು, ಪಕ್ಷದ ಎರಡನೇ ವರ್ಷದ ಸಂಸ್ಥಾಪನಾ ದಿನದ ಅಂಗವಾಗಿ ಸಹಾಯವಾಣಿ(ಮೊ- 7337837129)ಯನ್ನು ಆರಂಭಿಸಲಾಗಿದೆ ಎಂದು ಕೆಆರ್‌ಎಸ್ ಜಿಲ್ಲಾಧ್ಯಕ್ಷ ಅಶೋಕ್‌ರಾಜ್ ಕಾಡಬೆಟ್ಟು ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಆರ್‌ಎಸ್ ಪಕ್ಷದ ರಾಜ್ಯಮಟ್ಟದ ಸಹಾಯವಾಣಿ ಸಂಖ್ಯೆಯ ಮೂಲಕ ರಾಜ್ಯಾದಾದ್ಯಂತ ಜನರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸೂಕ್ತ ಪರಿಹಾರ ಒದಗಿಸುವ ಕೆಲಸ ಮಾಡುತ್ತಿದೆ. ಇದೀಗ ಜಿಲ್ಲಾ ಮಟ್ಟದಲ್ಲಿ ಜನರಿಗೆ ಸಹಾಯ ಮಾಡಲು ಜಿಲ್ಲಾವಾರು ಕಚೇರಿ ಹಾಗೂ ಸಹಾಯವಾಣಿ ತೆರೆಯಲಾಗಿದೆ ಎಂದರು.
ಸರಕಾರಿ ಕಚೇರಿಯಲ್ಲಿ ಯಾರಾದರೂ ಲಂಚ ಕೇಳಿದ್ದಲ್ಲಿ, ವಿನಾಕಾರಣ ಕೆಲಸಗಳನ್ನು ವಿಳಂಬ ಮಾಡಿದಲ್ಲಿ ಸರಕಾರಿ ನ್ಯಾಯಬೆಲೆ ಅಂಗಡಿಗಳಲ್ಲಿ ರೇಶನ್ ಕಡಿಮೆ ನೀಡಿದಲ್ಲಿ/ಹಣಕ್ಕೆ ಬೇಡಿಕೆ ಇಟ್ಟರೆ, ಪೊಲೀಸರ ದೌರ್ಜನ್ಯ, ಸುಳ್ಳು ಕೇಸು ದಾಖಲು ಸಂಬಂಧ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು. ಈ ಬಗ್ಗೆ ನಮ್ಮ ಪಕ್ಷದಿಂದ ಸ್ಪಂದಿಸಿ ಸಮಸ್ಯೆ ಪರಿಹಾರಕ್ಕೆ ಯತ್ನಿಸಲಾಗುವುದು. ಲಂಚ ಕೇಳಿದ ಅಧಿಕಾರಿಯ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿ ಸಲಾಗುತ್ತದೆ ಎಂದು ಅವರು ಭರವಸೆ ನೀಡಿದರು.
ಪಕ್ಷದ ಕಾನೂನು ಘಟಕಾಧ್ಯಕ್ಷ ಕೆ.ಭರತ್ ಪೈ. ಅಲ್ಪಸಂಖ್ಯಾತ ಘಟಕಾಧ್ಯಕ್ಷ ಇಕ್ಬಾಲ್ ಕುಂಜಿಬೆಟ್ಟು, ಜಿಲ್ಲಾ ಕಾರ್ಯದರ್ಶಿ ಹನ್ೀ ಕಾಪು, ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷ ಜಾಹಿದಾ ಬಾನು ಉಪಸ್ಥಿತರಿದ್ದರು.







