ಅನ್ಯ ಇಲಾಖೆಯಲ್ಲಿನ ಎಸ್ಸಿಪಿ- ಟಿಎಸ್ಪಿ ಹಣವನ್ನು ಹಿಂಪಡೆಯಲು ಮಾಜಿ ಸಚಿವ ಎಚ್. ಆಂಜನೇಯ ಸಲಹೆ

ಬೆಂಗಳೂರು, ಆ.10: 'ಪರಿಶಿಷ್ಟ ಜಾತಿ/ವರ್ಗಗಳ ಕಲ್ಯಾಣಕ್ಕೆ ಮೀಸಲಿಟ್ಟ ಅನ್ಯ ಇಲಾಖೆಯಲ್ಲಿರುವ ಎಸ್ಸಿಪಿ- ಟಿಎಸ್ಪಿ ಹಣ ವಾಪಸ್ಸು ಪಡೆಯಿರಿ. ಆ ಮೊತ್ತವನ್ನು ವಸತಿ, ಶಿಕ್ಷಣ, ಹಾಸ್ಟೆಲ್ ಸೌಲಭ್ಯಕ್ಕೆ ಬಳಸಲು ತೀರ್ಮಾನಿಸಿ' ಎಂದು ಮಾಜಿ ಸಚಿವ ಎಚ್. ಆಂಜನೇಯ ಸಲಹೆ ನೀಡಿದ್ದಾರೆ.
ಬೀದಿಗೆ ಬಿದ್ದಿರುವ ಜನರ ಬದುಕಿಗೆ ಸೂರು ಕಲ್ಪಿಸಬೇಕು. ರಾಜ್ಯ ಸರ್ಕಾರದ ಆಡಳಿತ ವೈಫಲ್ಯದಿಂದ ಎಲ್ಲ ವರ್ಗದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದ ಬಹುತೇಕ ಸಚಿವರು ದಕ್ಷವಾಗಿ ಕಾರ್ಯನಿರ್ವಹಿಸದ ಪರಿಣಾಮ ವಿವಿಧ ಇಲಾಖೆಗಳಲ್ಲಿನ ಹಣ ಸದ್ಬಳಕೆ ಆಗಿಲ್ಲ ಎಂದು ಅವರು ದೂರಿದ್ದಾರೆ.
ಅದರಲ್ಲೂ ಪರಿಶಿಷ್ಟ ಜಾತಿ, ವರ್ಗದ ಜನರಿಗೆ ವಸತಿ, ಶಿಕ್ಷಣ, ಹಾಸ್ಟೆಲ್ ಮತ್ತು ನಿರುದ್ಯೋಗಿಗಳಿಗೆ ಸ್ವಯಂ ಉದ್ಯೊಗ ಕೈಗೊಳ್ಳಲು ಸಾಲ, ಸಹಾಯಧನ ಸೌಲಭ್ಯ ಕಲ್ಪಿಸುವಲ್ಲಿ ಸಮಸ್ಯೆಗಳು ಎದುರಾಗಿದೆ. ಇದಕ್ಕೆ ಅನುದಾನ ಕೊರತೆ, ಲಾಕ್‌ಡೌನ್ ಉತ್ತರ ನೀಡುವುದು ಸಮಂಜಸವಲ್ಲ. ಈ ವರ್ಗದ ಜನರ ಪ್ರಗತಿಗಾಗಿ ಸಾವಿರಾರು ಕೋಟಿ ರೂ. ಮೀಸಲಿರುತ್ತದೆ. ಅದರ ಸದ್ಬಳಕೆ ಜ್ಞಾನ, ಇಚ್ಛಾಶಕ್ತಿ ರಾಜ್ಯ ಸರ್ಕಾರಕ್ಕೆ ಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಈ ವರ್ಗದ ಜನರ ಪ್ರಗತಿಗಾಗಿ ಹಣ ಹೊಂದಿಸುವ ಕೆಲಸವನ್ನು ರಾಜ್ಯ ಸರ್ಕಾರ ತುರ್ತಾಗಿ ಕೈಗೊಳ್ಳಬೇಕು. ಪಿಡಬ್ಲ್ಯೂಡಿ, ಗ್ರಾಮೀಣಾಭಿವೃದ್ಧಿ, ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿರುವ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನು ಸಮಾಜ ಕಲ್ಯಾಣ ಇಲಾಖೆ ವಾಪಸ್ಸು ಪಡೆಯಬೇಕು ಎಂದು ಅವರು ಕೋರಿದ್ದಾರೆ.
ಈಗಾಗಲೇ ದಲಿತ ಕಾಲನಿ ಗಳಲ್ಲಿ ಸಿ.ಸಿ.ರಸ್ತೆ ಸೇರಿದಂತೆ ಅನೇಕ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜೊತೆಗೆ ಉದ್ಯೋಗ ಖಾತ್ರಿ ಯೋಜನೆಯಡಿ ಈ ಪ್ರದೇಶದಲ್ಲಿ ಪ್ರಗತಿ ಕಾರ್ಯ ಕೈಗೊಳ್ಳಲಾಗಿದೆ. ಆದ್ದರಿಂದ ಅಲ್ಲಿ ಉಳಿದಿರುವ ಹಣ ವಾಪಸ್ಸು ಪಡೆಯುವುದು ಸೂಕ್ತ ನಿರ್ಧಾರ ಆಗಲಿದೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ದಲಿತ ಕಾಲನಿಗಳಲ್ಲಿ ಸಿಸಿ ರಸ್ತೆ ಸೇರಿ ಅಗತ್ಯಸೌಲಭ್ಯ ಕಲ್ಪಿಸಲು ಪಿಡಬ್ಲ್ಯೂಡಿ ಇಲಾಖೆಯಲ್ಲಿ ಉಳಿದಿರುವ ಸಾವಿರ ಕೋಟಿ ರೂ.ಗೂ ಹೆಚ್ಚು ಹಣವನ್ನು ಸಮಾಜ ಕಲ್ಯಾಣ ಇಲಾಖೆ ವಾಪಸ್ಸು ಪಡೆಯಬೇಕು. ಇದೇ ರೀತಿ ಅನುದಾನ ವಾಪಸ್ಸು ಪಡೆಯುವ ಪದ್ಧತಿಯನ್ನು ನೀರಾವರಿ, ಪಂಚಾಯತ್ ರಾಜ್ ಸೇರಿ ವಿವಿಧ ಇಲಾಖೆಗೂ ಅನ್ವಯಿಸಬೇಕು ಎಂದರು.
ಇದರಿಂದ ಸಮಾಜ ಕಲ್ಯಾಣ ಇಲಾಖೆಗೆ ಕೋಟ್ಯಂತರ ಹಣ ಹರಿಬರಲಿದೆ. ಇದರಿಂದ ಎಸ್ಸಿ, ಎಸ್ಟಿ ವರ್ಗದ ಜನರಿಗೆ ವಸತಿ, ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ, ಹಾಸ್ಟೆಲ್ ಮತ್ತು ನಿರುದ್ಯೋಗಿಗಳಿಗೆ ಸ್ವಯಂ ಉದ್ಯೊಗ ಕೈಗೊಳ್ಳಲು ಸಾಲ, ಸಹಾಯಧನ ಸೌಲಭ್ಯ ಕಲ್ಪಿಸಬಹುದು.
ಮೂರು ವರ್ಷದಿಂದ ರಾಜ್ಯದಲ್ಲಿ ಒಂದು ಗ್ರಾಂಟ್ ಮನೆ ಹಂಚಿಕೆಯಾಗಿಲ್ಲ. ಜೊತೆಗೆ ಈ ಹಿಂದೆ ಆರಂಭವಾಗಿದ್ದ ಮನೆಗಳ ನಿರ್ಮಾಣ ಕಾಮಗಾರಿ ಬಹುತೇಕ ನನೆಗುದಿಗೆ ಬಿದ್ದಿದೆ, ಹಲವೆಡೆ ಮನೆಗಳ ನಿರ್ಮಾಣ ಅರ್ಧಕ್ಕೆ ನಿಂತಿವೆ. ಈ ಮನೆಗಳ ನಿರ್ಮಾಣ ಪೂರ್ಣಗೊಳಿಸಲು ಸಕಾಲಕ್ಕೆ ರಾಜ್ಯ ಸರ್ಕಾರದ ಅನುದಾನ ನೀಡದಿರುವುದೇ ಮುಖ್ಯ ಕಾರಣವಾಗಿದೆ. ಇದರಿಂದ ಬಹಳಷ್ಟು ಮಂದಿ ಜನರ ಬದುಕು ಬೀದಿಗೆ ಬಿದ್ದಿದೆ. ಇದಕ್ಕೆ ರಾಜ್ಯ ಸರ್ಕಾರದ ಅಸಡ್ಡೆಯೇ ಮುಖ್ಯ ಕಾರಣ ಎಂದು ಹೇಳಿದರು.
ಈಗಿನ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಪರಿಶಿಷ್ಟ ಜಾತಿ ಜನರು ವಸತಿ ನಿರ್ಮಿಸಿಕೊಳ್ಳಲು 5 ಲಕ್ಷ ರೂ. ಹಣ ನೀಡುವ ಯೋಜನೆ ಘೋಷಿಸಿರುವುದು ಸ್ವಾಗತರ್ಹವಾಗಿದ್ದು, ಇದನ್ನು ಇತರೆ ವರ್ಗದ ಜನರಿಗೂ ವಿಸ್ತರಿಸಬೇಕು ಒತ್ತಾಯಿಸಿದರು.
ವಿಶೇಷ ಯೋಜನೆ ಘೋಷಿಸಿ ಇಚ್ಛಾಶಕ್ತಿ ಪ್ರದರ್ಶಿಸಿದ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಅಭಿನಂದಿಸುತ್ತೇನೆ ಎಂದು ಮಾಜಿ ಸಚಿವ ಆಂಜನೇಯ ಪ್ರಕಟನೆ ಯಲ್ಲಿ ಅಭಿನಂದಿಸಿದ್ದಾರೆ.







