ವಿವಾಹಿತ ಮಹಿಳೆಯತ್ತ ಪ್ರೇಮಪತ್ರ ಎಸೆಯುವುದು ಆಕೆಯ ಘನತೆಯನ್ನು ಅವಮಾನಿಸುತ್ತದೆ: ಬಾಂಬೆ ಹೈಕೋರ್ಟ್

ನಾಗ್ಪುರ,ಆ.10: ಪ್ರೇಮವನ್ನು ನಿವೇದಿಸಿಕೊಂಡು ಚೀಟಿಯನ್ನು ವಿವಾಹಿತ ಮಹಿಳೆಯತ್ತ ಎಸೆಯುವುದು ಆಕೆಯ ಒಳ್ಳೆಯತನದ ದುರುಪಯೋಗ ವಾಗುತ್ತದೆ ಮತ್ತು ಆಕೆಯ ಘನತೆಗೆ ಮಾಡುವ ಅವಮಾನವಾಗುತ್ತದೆ ಎಂದು ಬಾಂಬೆ ಹೈಕೋರ್ಟ್ ನ ನಾಗ್ಪುರ ಪೀಠವು ತೀರ್ಪು ನೀಡಿದೆ.
ಆರೋಪಿ ಶ್ರೀಕೃಷ್ಣ ತವರಿ ಎಂಬಾತನಿಗೆ 90,000 ರೂ.ಗಳ ದಂಡವನ್ನು ವಿಧಿಸಿದ ನ್ಯಾಯಾಲಯವು, ಅದರಲ್ಲಿ 85,000 ರೂ.ಗಳನ್ನು ಪರಿಹಾರವಾಗಿ ಸಂತ್ರಸ್ತ ಮಹಿಳೆಗೆ ನೀಡುವಂತೆ ಆದೇಶಿಸಿದೆ.
2011,ಅ.3ರಂದು ಘಟನೆ ನಡೆದಿತ್ತು. ಅಕೋಲಾದಲ್ಲಿ ಕಿರಾಣಿ ಅಂಗಡಿಯೊಂದನ್ನು ಹೊಂದಿರುವ ಆರೋಪಿಯು ಪಾತ್ರೆಗಳನ್ನು ತೊಳೆಯುತ್ತಿದ್ದ ನೆರೆಕರೆಯ ವಿವಾಹಿತ ಮಹಿಳೆಯ ಬಳಿ ತೆರಳಿ ಚೀಟಿಯೊಂದನ್ನು ನೀಡಲು ಪ್ರಯತ್ನಿಸಿದ್ದ. ಆಕೆ ಅದನ್ನು ಸ್ವೀಕರಿಸಲು ನಿರಾಕರಿಸಿದಾಗ ಚೀಟಿಯನ್ನು ಆಕೆಯತ್ತ ಎಸೆದು,‘ಐ ಲವ್ ಯೂ’ಎಂದು ಹೇಳಿ ಅಲ್ಲಿಂದ ತೆರಳಿದ್ದ. ಮರುದಿನ ಆಕೆಗೆ ಅಶ್ಲೀಲ ಸನ್ನೆಗಳನ್ನು ಮಾಡಿದ್ದ ಆರೋಪಿಯು ಚೀಟಿಯಲ್ಲಿನ ವಿಷಯವನ್ನು ಬಹಿರಂಗಗೊಳಿಸದಂತೆ ಎಚ್ಚರಿಕೆ ನೀಡಿದ್ದ. ಈ ಬಗ್ಗೆ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
2018,ಜೂ,21ರಂದು ಐಪಿಸಿಯ 354,509 ಮತ್ತು 506 ಕಲಮ್ ಗಳಡಿ ತವರಿಯನ್ನು ತಪ್ಪಿತಸ್ಥ ಎಂದು ಘೋಷಿಸಿದ್ದ ಸೆಷನ್ಸ್ ನ್ಯಾಯಾಲಯವು ಎರಡು ವರ್ಷಗಳ ಕಠಿಣ ಶಿಕ್ಷೆ ಮತ್ತು 40,000 ರೂ.ದಂಡವನ್ನು ವಿಧಿಸಿ, ಈ ಪೈಕಿ 35,000 ರೂ.ಗಳನ್ನು ಮಹಿಳೆಗೆ ಪರಿಹಾರ ರೂಪದಲ್ಲಿ ನೀಡುವಂತೆ ಆದೇಶಿಸಿತ್ತು.
ಕ್ರಿಮಿನಲ್ ಪರಿಷ್ಕರಣೆ ಅರ್ಜಿಯನ್ನು ಸಲ್ಲಿಸುವ ಮೂಲಕ ಈ ತೀರ್ಪನ್ನು ಪ್ರಶ್ನಿಸಿದ್ದ ತವರಿ,ಮಹಿಳೆ ತನ್ನ ಅಂಗಡಿಯಿಂದ ಕಿರಾಣಿ ಸಾಮಗ್ರಿಗಳನ್ನು ಸಾಲವಾಗಿ ಪಡೆದುಕೊಂಡಿದ್ದು,ಅದನ್ನು ತೀರಿಸಲು ಸಿದ್ಧವಿರಲಿಲ್ಲ,ಹೀಗಾಗಿ ತನ್ನ ವಿರುದ್ಧ ಸುಳ್ಳು ದೂರನ್ನು ದಾಖಲಿಸಿದ್ದಾಳೆ ಎಂದು ವಾದಿಸಿದ್ದ.
ಆದರೆ ಕಲಂ 506ರಡಿ ತವರಿಯ ದೋಷನಿರ್ಣಯವನ್ನು ರದ್ದುಗೊಳಿಸಿದ ಉಚ್ಚ ನ್ಯಾಯಾಲಯವು,ಶಿಕ್ಷೆಯ ಅವಧಿಯನ್ನು ಪರಿಷ್ಕರಿಸಿತು. ಆತ ಸುಧಾರಣೆ ಅವಕಾಶಕ್ಕೆ ಅರ್ಹನಾಗಿದ್ದಾನೆ. ಆತ ಈಗಾಗಲೇ 45 ದಿನಗಳ ಜೈಲುವಾಸವನ್ನು ಅನುಭವಿಸಿದ್ದಾನೆ ಮತ್ತು ಇನ್ನಷ್ಟು ಜೈಲುವಾಸದಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಅದು ಹೇಳಿತಾದರೂ ಸೆಷನ್ಸ್ ನ್ಯಾಯಾಲಯವು ವಿಧಿಸಿದ್ದ ದಂಡದ ಮೊತ್ತವನ್ನು 90,000 ರೂ.ಗಳಿಗೆ ಹೆಚ್ಚಿಸಿತು.
-







