ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಸಂಸ್ಕಾರ ಮತ್ತು ಸಂಸ್ಕೃತಿಯೇ ಗೊತ್ತಿಲ್ಲ: ಸಿದ್ದರಾಮಯ್ಯ ವಾಗ್ದಾಳಿ

ಮೈಸೂರು,ಆ.10: ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಸಂಸ್ಕಾರ ಮತ್ತು ಸಂಸ್ಕೃತಿಯೇ ಗೊತ್ತಿಲ್ಲ ಹಾಗಾಗಿ ಬಾಯಿಗೆ ಬಂದಹಾಗೆ ಮಾತನಾಡುತ್ತಿದ್ದಾರೆ ಎಂದು ಇತ್ತೀಚೆಗಿನ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಸಚಿವ ಈಶ್ವರಪ್ಪ ಮತ್ತು ಬಿಜೆಪಿಯವರಿಗೆ ಸಂಸ್ಕೃತಿಯೇ ಗೊತ್ತಿಲ್ಲ, ಹಾಗಾಗಿ ಬಾಯಿಗೆ ಬಂದಹಾಗೆ ಮಾತನಾಡುತ್ತಿದ್ದಾರೆ. ಸಂಸ್ಕಾರ ಇರುವವರು ಇಂತಹ ಪದವನ್ನು ಬಳಸುವುದಿಲ್ಲ, ಈಶ್ವರಪ್ಪ ಬೆಳೆದು ಬಂದಿರುವ ಹಾದಿಯೇ ಹಾಗಿದೆ' ಎಂದು ಕಿಡಿಕಾರಿದರು.
'ಸಚಿವ ಈಶ್ವರಪ್ಪನ ಹೇಳಿಕೆ ನೋಡಿದರೆ ಇವರು ನಡೆದುಕೊಂಡು ಬಂದಿರುವ ದಾರಿ ಎಂತದ್ದು ಎಂಬುದು ಅರ್ಥವಾಗುತ್ತದೆ. ಇಂತವರಿಂದ ಬದಲಾವಣೆಗಳನ್ನು ನಿರೀಕ್ಷೆ ಮಾಡಲೇಬಾರದು, ಆಡಳಿತದಲ್ಲಿರುವವರು ಟೀಕೆಗಳನ್ನು ಆರೋಗ್ಯ ಪೂರ್ಣವಾಗಿ ಸ್ವೀಕರಿಸಬೇಕು, ರಾಜಕಾರಣದಲ್ಲಿ ಟೀಕೆ ಬರುವುದು ಸಹಜ, ಅದಕ್ಕೆ ಈ ರೀತಿಯ ಪ್ರತಿಕ್ರಿಯೆ ನೀಡೋದು ಸರಿಯಲ್ಲ' ಎಂದು ಹೇಳಿದರು.
ಈಶ್ವರಪ್ಪ ಮೊದಲಿನಿಂದಲೂ ಹೀಗೆಯೇ ಮಾತನಾಡುತ್ತಿದ್ದಾರೆ. ಅವರಿಗೆ ಆರೋಗ್ಯಕರವಾದ ಸಂಸ್ಕೃತಿಯೇ ಗೊತ್ತಿಲ್ಲ, ಬಿಜೆಪಿಯವರ ಸಂಸ್ಕೃತಿಯೇ ಇಂತದ್ದು, ಈಶ್ವರಪ್ಪ ಅವರಿಗೆ ಬುದ್ಧಿ ಹೇಳುವ ಕೆಲಸವನ್ನು ಬಿಜೆಪಿ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಇಲಿಯೋ ಅಥವಾ ಹುಲಿಯೋ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ. ಈಶ್ವರಪ್ಪನ ಸರ್ಟಿಫಿಕೇಟ್ ಬೇಕಿಲ್ಲ, ನಾನು ಏನು ಎಂಬುದು ಈ ರಾಜ್ಯದ ಜನತೆಗೆ ಗೊತ್ತು ಎಂದು ಸಿದ್ದರಾಮಯ್ಯ ಹೇಳಿದರು.







