ನನಗೆ ಸಚಿವ ಸ್ಥಾನ ತಪ್ಪಿಸಿದವರ ಹೆಸರು ನನಗೆ ಮಾತ್ರ ಗೊತ್ತಿರಬೇಕು: ಶಾಸಕ ಎಸ್.ಎ.ರಾಮದಾಸ್

ಮೈಸೂರು,ಆ.10: 'ಸಚಿವ ಸ್ಥಾನದ ಮೇಲೆ ನನಗೂ ಕೂಡ ಆಸೆ ಇತ್ತು. ಆದರೆ ಅದು ಕೈ ತಪ್ಪಿತು. ಸಚಿವ ಸ್ಥಾನವನ್ನು ತಪ್ಪಿಸಿದವರು ನನ್ನ ಲವರ್. ಅವರ ಹೆಸರು ನನಗೆ ಮಾತ್ರ ಗೊತ್ತಿರಬೇಕು. ಅವರಿಗೆ ಈಗಾಗಲೇ ನಾನು ಅಭಿನಂದನೆ ಸಲ್ಲಿಸಿದ್ದೇನೆ' ಎಂದು ಶಾಸಕ ಎಸ್.ಎ. ರಾಮದಾಸ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ನಾನು ಯಾವತ್ತೂ ಭಾರತೀಯ ಜನತಾ ಪಕ್ಷದಲ್ಲಿ ಟಿಕೇಟ್ ಕೊಡಿ, ಸಚಿವ ಸ್ಥಾನ ಕೊಡಿ ಎಂದು ಕೇಳಿದವನಲ್ಲ. ಈಗಲೂ ನನಗೆ ಕೇಳೋದಕ್ಕೆ ಏನೂ ಇಲ್ಲ ಎಂದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಮೈಸೂರು ಜಿಲ್ಲೆಯಲ್ಲಿ ಐದು ಜನ ಮಂತ್ರಿಗಳಿದ್ದರು, ಜೆಡಿಎಸ್ ಅಧಿಕಾರಕ್ಕೆ ಬಂದಾಗಲೂ ಐದು ಜನ ಮಂತ್ರಿಗಳಿದ್ದರು, ಭಾರತೀಯ ಜನತಾ ಪಕ್ಷ ಬಂದಾಗ ಮಾತ್ರ ಎಲ್ಲೋ ಒಂದು ಕಡೆ ಅರ್ಹತೆಯ ಬಗ್ಗೆ ಜನರು ಮಾತನಾಡುತ್ತಿದ್ದಾರೆ' ಎಂದು ಬೇಸರ ವ್ಯಕ್ತಪಡಿಸಿದರು.
'ನಾನೆಲ್ಲೂ ನನಗೆ ಮಂತ್ರಿ ಸ್ಥಾನ ಕೊಟ್ಟಿಲ್ಲವೆಂದು ದುಃಖದಿಂದ ಹೇಳಿಲ್ಲ, ನಗುತ್ತಲೇ ಹೇಳಿದೆ. ಯಡಿಯೂರಪ್ಪನವರು ಮಂತ್ರಿ ಸ್ಥಾನವನ್ನು ಕೊಟ್ಟಿದ್ದೇವಪ್ಪಾ ಚೆನ್ನಾಗಿ ಕೆಲಸ ಮಾಡು ಎಂದಿದ್ದರು. ಅವರದ್ದು ತಂದೆಯ ಸ್ಥಾನ. ಹಾಗೆ ಇವತ್ತು ಪಕ್ಷದ ಅಧ್ಯಕ್ಷರು ಕೂಡ ನೀವು ಅನುಭವದಲ್ಲಿ ಹಿರಿಯರಿದ್ದೀರಿ, ಪಕ್ಷ ನಿಷ್ಠೆ ವಿಚಾರದಲ್ಲೂ ಮೊದಲ ಸ್ಥಾನದಲ್ಲಿದ್ದೀರಿ ಎಂದಿದ್ದರು. ನಿಮ್ಮನ್ನು ಸೂಚನೆ ಮಾಡಿದ್ದೇವೆ ಆಗತ್ತೆ ಎಂದಿದ್ದರು. ಎಲ್ಲರೂ ಹೇಳಿದ್ದರು. ಪಟ್ಟಿಯಲ್ಲಿತ್ತು. ಆದರೆ ಕೊನೆ ಕ್ಷಣದಲ್ಲಿ ಬದಲಾವಣೆಯಾಗಿದೆ. ಆದರೆ ಕೊನೆಯ ಕ್ಷಣದಲ್ಲಿ ಫೋನ್ ಕರೆ ಮಾಡಿ ಸಿಗದಂತೆ ಮಾಡಿದರು. ಹಾಗಾಗಿಯೇ ಅವರು ನನ್ನ ಲವರ್ ಅಂತ ಹೇಳಿದ್ದು, ಅವರ ಹೆಸರನ್ನು ಬಹಿರಂಗಪಡಿಸಲ್ಲ' ಎಂದು ಹೇಳಿದರು.







