ಕರ್ನಾಟಕದ 865 ಗ್ರಾಮಗಳನ್ನು ಮಹಾರಾಷ್ಟ್ರದಲ್ಲಿ ವಿಲೀನಕ್ಕೆ ಆಗ್ರಹಿಸಿ ಪ್ರಧಾನಿಗೆ ಮುಂಬೈ ಮೇಯರ್ ಪತ್ರ

photo: twitter.com/KishoriPednekar
ಮುಂಬೈ, ಆ. 10: ಪ್ರಸ್ತುತ ಕರ್ನಾಟಕದಲ್ಲಿ ಇರುವ 865 ಗಡಿ ಗ್ರಾಮಗಳನ್ನು ಮಹಾರಾಷ್ಟ್ರದಲ್ಲಿ ವಿಲೀನಗೊಳಿಸುವಂತೆ ಆಗ್ರಹಿಸಿ ಬೃಹನ್ಮುಂಬಯಿ ಮುನ್ಸಿಪಾಲ್ ಕಾರ್ಪೋರೇಶನ್ (ಬಿಎಂಸಿ)ನ ಮೇಯರ್ ಕಿಶೋರಿ ಪಡ್ನೇಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
1956ರಲ್ಲಿ ಭಾಷಾಧಾರಿತ ರಾಜ್ಯಗಳ ರಚನೆಯಾದಾಗ ಈ ಗ್ರಾಮಗಳು ಕರ್ನಾಟಕಕ್ಕೆ ಸೇರ್ಪಡೆಯಾಗಿದ್ದವು. ಆದರೆ, ಇಲ್ಲಿ ಬಹುಪಾಲು ಜನರು ಮರಾಠಿ ಮಾತನಾಡುತ್ತಿದ್ದಾರೆ ಎಂದು ಪಡ್ನೇಕರ್ ಹೇಳಿದ್ದಾರೆ. ‘‘ಈ ಗ್ರಾಮಗಳಲ್ಲಿ ಮರಾಠಿ ಮಾತೃ ಭಾಷೆಯ ಸುಮಾರು 40 ಲಕ್ಷ ಜನರಿದ್ದಾರೆ. ಅವರು ಮಹಾರಾಷ್ಟ್ರದ ಭಾಗವಾಗಲು ಬಯಸಿದ್ದಾರೆ. ಅಲ್ಲದೆ, ಈ ಜನರು ಇತರ ಸಂಸ್ಕೃತಿ ಹಾಗೂ ಭಾಷೆ ಅನುಸರಿಸುವ ಬಲವಂತಕ್ಕೆ ಒಳಗಾಗಿದ್ದಾರೆ. ಅನ್ಯಾಯ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಕ್ರಾಂತಿಯ ದಿನವಾದ ಆಗಸ್ಟ್ 9ರಂದು ಈ 40 ಲಕ್ಷ ಜನರನ್ನು ಮಹಾರಾಷ್ಟ್ರಕ್ಕೆ ಸೇರಿಸಿ ಎಂದು ನಾನು ಮನವಿ ಮಾಡುತ್ತಿದ್ದೇನೆ’’ ಎಂದು ಪಡ್ನೇಕರ್ ಆಗಸ್ಟ್ 9ರಂದು ನರೇಂದ್ರ ಮೋದಿ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. ಕಳೆದ ಕೆಲವು ದಶಕಗಳಿಂದ ಕರ್ನಾಟಕ ಭಾಗವಾದ ಬೆಳಗಾಂವ್ ನಲ್ಲಿ ಗಡಿ ವಿಷಯಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಹಾಗೂ ಕರ್ನಾಟಕದ ನಡುವೆ ಘರ್ಷಣೆ ನಡೆಯತ್ತಿದೆ. ಬೆಳಗಾಂವ್ನಲ್ಲಿ ಮರಾಠಿ ಮಾತನಾಡುವ ಜನರೇ ಹೆಚ್ಚಿದ್ದಾರೆ, ಅದುದರಿಂದ ಅದನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮಹಾರಾಷ್ಟ್ರ ಆಗ್ರಹಿಸುತ್ತಾ ಬಂದಿದೆ. ಆದರೆ, ಕರ್ನಾಟಕ ಈ ಆಗ್ರಹವನ್ನು ವಿರೋಧಿಸುತ್ತಿದೆ.







