ಗುರುಪುರದ ಪ್ರಗತಿಪರ ಕೃಷಿಕ ಕಿಟ್ಟಣ್ಣ ರೈ ನಿಧನ

ಮಂಗಳೂರು, ಆ.10: ಗುರುಪುರ ಕಾರಮೊಗರು ನಿವಾಸಿ, ಪ್ರಗತಿಪರ ಕೃಷಿಕ ಹಾಗೂ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿದ್ದ ಕಾರಮೊಗರುಗುತ್ತು ಜಿ.ಕೆ. ಕಿಟ್ಟಣ್ಣ ರೈ ಮಂಗಳವಾರ ನಿಧನರಾದರು.
ಮಂಗಳೂರು ಸರಕಾರಿ ಕಾಲೇಜಿನಲ್ಲಿ ಬಿಎ ಪದವಿ ಗಳಿಸಿರುವ ಇವರು, ಅವಳಿ ಜಿಲ್ಲೆಯಲ್ಲಿ ಕಬ್ಬಡಿ ಆಟಗಾರರಾಗಿ ಚಿರಪರಿಚಿತರಾಗಿದ್ದರು. ರೈತ ಸಂಘಟನೆಯ ಹಸಿರು ಸೇನೆಯ ಸ್ಥಳೀಯ ಮುಖಂಡರಾಗಿದ್ದ ಸರಳ ವ್ಯಕ್ವಿತ್ವದ ರೈ, ಗುರುಪುರದಲ್ಲಿ ಹೊಸ ಸೇತುವೆ ನಿರ್ಮಾಣಕ್ಕಾಗಿ ರಚಿಸಲಾಗಿದ್ದ ‘ಗುರುಪುರ ಸೇತುವೆ ಹೋರಾಟ ಸಮಿತಿ’ಯಲ್ಲಿ ಮುಂಚೂಣಿಯಲ್ಲಿದ್ದರು. ಪ್ರಸ್ತುತ ಕೃಷಿ ಹಾಗೂ ಹೈನುಗಾರಿಕೆಯೊಂದಿಗೆ ಮರಳಿನ ವ್ಯಾಪಾರ ನಡೆಸುತ್ತಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು, ನಾಲ್ವರು ಸಹೋದರರು, ಇಬ್ಬರು ಸಹೋದರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಗಣ್ಯರಿಂದ ಅಂತಿಮದರ್ಶನ: ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಬಿ.ಎ. ಮೊದಿನ್ ಬಾವ, ಗುರುಪುರ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ರವೀಂದ್ರ ಕಂಬಳಿ, ಮಂಗಳೂರು ರೈಲ್ವೆ ಜಂಕ್ಷನ್‌ನ ರೈಲ್ವೆ ಪೊಲೀಸ್ ನಿರೀಕ್ಷಕ ಮೋಹನ್ ಕೊಟ್ಟಾರಿ, ಗುರುಪುರ ಗ್ರಾಪಂ ಅಧ್ಯಕ್ಷ ಯಶವಂತ ಶೆಟ್ಟಿ, ಪಂಚಾಯತ್ ಸದಸ್ಯರು, ಸ್ಥಳೀಯ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಧಾರ್ಮಿಕ-ಸಾಮಾಜಿಕ ಕ್ಷೇತ್ರದ ಮುಖಂಡರು, ಮರಳು ವ್ಯಾಪಾರಿಗಳು ಹಾಗೂ ಸ್ಥಳೀಯರು ರೈಯವರ ಅಂತಿಮ ದರ್ಶನ ಪಡೆದುಕೊಂಡರು.







