ಮಲೆನಾಡಿನಲ್ಲಿ ಮುಂದುವರಿದ ಕಾಡಾನೆಗಳ ದಾಳಿ: ಆತಂಕದಲ್ಲಿ ರೈತರು

ಚಿಕ್ಕಮಗಳೂರು, ಆ.10: ಜಿಲ್ಲೆಯ ಮಲೆನಾಡು ಭಾಗದಲ್ಲಿ ಅನೇಕ ಗ್ರಾಮಗಳ ವ್ಯಾಪ್ತಿಯಲ್ಲಿ ಮತ್ತೆ ಕಾಡಾನೆಗಳ ದಾಳಿ ಆರಂಭವಾಗಿದ್ದು, ಹಿಂಡು ಹಿಂಡಾಗಿ ರೈತರ ಕಾಫಿ, ಅಡಿಕೆ, ಭತ್ತ, ಬಾಳೆ ತೋಟಗಳಿಗೆ ದಾಳಿ ಇಡುತ್ತಿರುವ ಕಾಡಾಡನೆಗಳು ರೈತರ ಬೆಳೆ ಹಾನಿ ಮಾಡತ್ತಿವೆ. ಮತ್ತೊಂದೆಡೆ ಜನವಸತಿ ಪ್ರದೇಶಗಳಿಗೂ ಲಗ್ಗೆ ಇಡುತ್ತಿರುವುದರಿಂದ ಮಲೆನಾಡಿನ ಜನರು ಜೀವಭಯದಲ್ಲಿ ದಿನಕಳೆಯುವಂತಾಗಿದೆ.
ಮಲೆನಾಡಿನಲ್ಲಿ ಪ್ರತಿದಿನ ಒಂದಿಲ್ಲೊಂದು ದಿಕ್ಕಿನಿಂದ ಹಿಂಡು ಹಿಂಡಾಗಿ ಜನವಸತಿ ಪ್ರದೇಶ ಹಾಗೂ ತೋಟಗಳಿಗೆ ದಾಳಿ ಇಡುತ್ತಿರುವ ಕಾಡಾನೆಗಳು ಸಾರ್ವಜನಿಕರನ್ನು ದಂಗು ಬಡಿಸುತ್ತಿವೆ. ಮಂಗಳವಾರ ಮೂಡಿಗೆರೆ ತಾಲೂಕಿನ ಗೋಣಿಬೀಡು, ಹೊಸಳ್ಳಿ ಗ್ರಾಮದ ಜನವಸತಿ ಪ್ರದೇಶಗಳಲ್ಲಿ ಕಾಡಾನೆಯೊಂದು ರಾಜಾರೋಷವಾಗಿ ಕಾಫಿ ತೋಟಗಳ ಮಾರ್ಗವಾಗಿ ಬಂದು ರಸ್ತೆ ದಾಟುತ್ತಿರುವ ದೃಶ್ಯವನ್ನು ಸ್ಥಳೀಯರು ಕ್ಯಾಮರದಲ್ಲಿ ಸೆರೆ ಹಿಡಿದಿದ್ದಾರೆ. ತಾಲೂಕಿನ ಮೂಲರಹಳ್ಳಿ ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಮೂರು ಕಾಡಾನೆಗಳು ಕೆಲ ದಿನಗಳಿಂದ ಬೀಡುಬಿಟ್ಟಿವೆ. ಗ್ರಾಮದ ನವೀನ್, ರವೀಶ್, ಸುಬ್ರಾಯಗೌಡ, ಲಕ್ಷ್ಮಣ್‍ಗೌಡ, ರಘುರಾಮ್, ಭೈರಪ್ಪಗೌಡ, ಕಿರಣ್, ಕೃಷ್ಣೇಗೌಡ ಎಂಬವರ ಕಾಫಿ, ಅಡಿಕೆ, ಬಾಳೆ ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ನಾಶ ಮಾಡಿರುವ ಬಗ್ಗೆ ರೈತರು ದೂರು ನೀಡಿದ್ದಾರೆ.
ಮೂಲರಗಳ್ಳಿ ಮೂಡಿಗೆರೆ ತಾಲೂಕಿನಲ್ಲೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ. ಇಲ್ಲಿ ಜೀವನ ಸಾಗಿಸುವುದು ದುಸ್ತರವಾಗಿದೆ. ಮಳೆಯಿಂದ ಬೆಳೆಗಳು ಒಂದೆಡೆ ನಾಶವಾಗಿದ್ದರೇ, ಮತ್ತೊಂದು ಕಡೆ ಕಾಡು ಪ್ರಾಣಿಗಳ ಕಾಟದಿಂದ ರೈತರು ಭಾರೀ ನಷ್ಟ ಅನುಭವಿಸುವಂತಾಗಿದ್ದು, ಗ್ರಾಮಸ್ಥರು ಕಾಡುಪ್ರಾಣಿಗಳಿಂದ ಊರು ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ ಕಾಡಾನೆಗಳು 4 ಮಂದಿಯನ್ನು ಬಲಿ ಪಡೆದಿವೆ. ಮೂರು ವರ್ಷಗಳ ಹಿಂದೆ ಸುನೀಲ್ ಎಂಬ ಯುವಕ ಆನೆ ದಾಳಿಯಿಂದ ಮೃತಪಟ್ಟಾಗ ಗ್ರಾಮಸ್ಥರು ಯುವಕನ ಮೃತದೇಹವನ್ನು ಅರಣ್ಯಾಧಿಕಾರಿಗಳ ಕಚೇರಿ ಎದುರು ಇಟ್ಟು ಪ್ರತಿಭಟನೆ ನಡೆಸಿದ್ದರು. ಇಂತಹ ಎಷ್ಟೇ ಘಟನೆಗಳಿಂದಾಗಿ ಜನ ಬಲಿಯಾದರೂ, ಸಂತ್ರಸ್ಥ ರೈತರು ನಿರಂತರ ಪ್ರತಿಭಟನೆ ನಡೆಸಿದರೂ ಸರಕಾರ ಮಾತ್ರ ಕಾಡಾನೆಗಳ ನಿಯಂತ್ರಣಕ್ಕೆ ಶಾಶ್ವತ ಕ್ರಮಕೈಗೊಳ್ಳದೇ ಮಲೆನಾಡಿನ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ.
ಈ ಭಾಗದ ಕಾಫಿ ತೋಟಗಳ ಮಾಲಕರು ಕಾಡಾನೆಗಳ ದಾಳಿಯಿಂದ ಕಾಫಿ, ಅಡಿಕೆ, ಬಾಳೆಯಂತಹ ಬೆಳೆಗಳಿಂದ ರಕ್ಷಣೆ ಪಡೆಯಲು ಕಾಡಂಚಿನ ಗ್ರಾಮಗಳಲ್ಲಿನ ಆನೆ ಕಾರಿಡಾರ್‍ಗಳಲ್ಲಿ ರೈಲ್ವೆ ಕಂಬಿಗಳ ಬ್ಯಾರಿಕೇಡ್, ಕಂದಕ ನಿರ್ಮಾಣದಂತಹ ಯೋಜನೆಗಳ ಜಾರಿಗೆ 3 ದಶಕಗಳಿಂದ ಆಗ್ರಹಿಸುತ್ತಿದ್ದಾರೆ. ಇದಕ್ಕೆ ಜನಪ್ರತಿನಿಧಿಗಳು, ಸರಕಾರದಿಂದ ಭರವಸೆ ಸಿಗುತಿದೆಯೇ ಹೊರತು ಭರವಸೆ ಮಾತ್ರ ಈಡೇರುತ್ತಿಲ್ಲ ಎಂಬುದು ರೈತರ ಅಳಲಾಗಿದೆ.
.jpg)







