ದಲಿತ ಬಾಲಕಿಯ ಅತ್ಯಾಚಾರ, ಹತ್ಯೆ ಪ್ರಕರಣ: ನಾಲ್ವರು ಆರೋಪಿಗಳು ದಿಲ್ಲಿ ಪೊಲೀಸ್ ಕಸ್ಟಡಿಗೆ
ಹೊಸದಿಲ್ಲಿ, ಆ. 10: ಒಂಬತ್ತು ವರ್ಷದ ದಲಿತ ಬಾಲಕಿಯ ಅತ್ಯಾಚಾರ ಹಾಗೂ ಹತೈ ಪ್ರಕರಣದ ನಾಲ್ವರು ಆರೋಪಿಗಳನ್ನು ಸೋಮವಾರ ಮೂರು ದಿನಗಳ ಕಾಲ ದಿಲ್ಲಿ ಪೊಲೀಸರ ಕಸ್ಟಡಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಗಸ್ಟ್1ರಂದು ಬಾಲಕಿಯ ಮೃತದೇಹ ನೈಋತ್ಯ ದಿಲ್ಲಿಯ ಹಳೆ ನಂಗಲ್ ಗ್ರಾಮದ ಚಿತಾಗರದಲ್ಲಿ ಸಂದೇಹಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು.
ಚಿತಾಗರದ ಅರ್ಚಕ ಬಾಲಕಿಯ ಮೇಲೆ ಅತ್ಯಾಚಾರ, ಹತ್ಯೆಗೈದು ಮೃತದೇಹವನ್ನು ಸುಟ್ಟು ಹಾಕಿದ್ದಾನೆ ಎಂದು ಬಾಲಕಿಯ ಹೆತ್ತವರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಬಾಲಕಿಯ ಹೆತ್ತವರೊಂದಿಗೆ ಸ್ಥಳೀಯರು ಈ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದ್ದರು. ರಸ್ತೆ ತಡೆ ನಡೆಸಿ ನ್ಯಾಯ ನೀಡುವಂತೆ ಆಗ್ರಹಿಸಿದ್ದರು.
ಪ್ರಕರಣದ ನಾಲ್ವರು ಆರೋಪಿಗಳನ್ನು ಮೂರು ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡಲಾಗಿದೆ. ಅವರ ವಿಚಾರಣೆ ನಡೆಸಲಾಗುವುದು ಎಂದು ಕ್ರೈಮ್ ಬ್ರಾಂಚನ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕ್ರೈಮ್ ಬ್ರಾಂಚ್ ನ ಹಿರಿಯ ಅಧಿಕಾರಿಗಳು ಕಳೆದ ವಾರ ಎರಡು ಬಾರಿ ಚಿತಾಗಾರಕ್ಕೆ ಭೇಟಿ ನೀಡಿದ್ದರು. ಮೃತಪಟ್ಟ ತಾಯಿಯ ಹೇಳಿಕೆ ಆಧಾರದಲ್ಲಿ ಎಫ್ಐಆರ್ನಲ್ಲಿ ಅತ್ಯಾಚಾರದ ಆರೋಪ ಸೇರಿಸಲಾಗಿದೆ ಎಂದು ಪೊಲೀಸರು ಈ ಹಿಂದೆ ತಿಳಿಸಿದ್ದರು.





