ಉಡುಪಿಯ ರೋಬೋಸಾಫ್ಟ್ ಕಂಪನಿಯನ್ನು ಖರೀದಿಸಿದ ಜಪಾನಿನ ಟೆಕ್ನೋ ಪ್ರೊ ಸಂಸ್ಥೆ

photo : twitter.com/@Robosoft
ಉಡುಪಿ, ಆ.10: ಉದ್ಯಮಗಳಿಗೆ ಡಿಜಿಟಲ್ ಟ್ರಾನ್ಸ್ಫಾರ್ಮೇಷನ್ ಸೊಲ್ಯೂಷನ್ ಗಳನ್ನು ಒದಗಿಸುವ ಕರಾವಳಿಯ ಖ್ಯಾತ ಸಾಫ್ಟವೇರ್ ಕಂಪನಿ ಉಡುಪಿ ಮೂಲದ ರೋಬೋಸಾಫ್ಟ್ ಟೆಕ್ನಾಲಜಿಸ್ ಪ್ರೈ.ಲಿ.ತನ್ನ ಶೇ.100 ಪಾಲುದಾರಿಕೆಯನ್ನು ಜಪಾನಿನ ಟೆಕ್ನೋಪ್ರೊ ಹೋಲ್ಡಿಂಗ್ಸ್ ಗೆ ಮಾರಾಟ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದೆ.
ಕಂಪನಿಯಲ್ಲಿನ ಶೇ.100 ಪಾಲು ಬಂಡವಾಳದ ಮಾರಾಟಕ್ಕೆ ಟೆಕ್ನೋಪ್ರೊ ಜೊತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ರೋಬೋಸಾಫ್ಟ್ ನ ಶೇರುದಾರರು ಮಂಗಳವಾರ ಪ್ರಕಟಿಸಿದ್ದಾರೆ.
ರೋಬೋಸಾಫ್ಟ್ ಮುಖ್ಯವಾಗಿ ಅಮೆರಿಕ,ಜಪಾನ್ ಮತ್ತು ಭಾರತದಲ್ಲಿಯ ಗ್ರಾಹಕರಿಗೆ ಡಿಜಿಟಲ್ ಸೊಲ್ಯೂಷನ್ ಸೇವೆಗಳನ್ನು ಒದಗಿಸುತ್ತಿದೆ. ಮೊದಲ ಹಂತದಲ್ಲಿ ಶೇ.80ರಷ್ಟು ಮತ್ತು ಎರಡನೇ ಹಂತದಲ್ಲಿ (ಅಂದಾಜು ಒಂದು ವರ್ಷದ ಬಳಿಕ) ಶೇ.20ರಷ್ಟು ಶೇರುಗಳ ಮಾರಾಟದ ವಹಿವಾಟುಗಳಲ್ಲಿ ರೋಬೋಸಾಫ್ಟ್ ಟೆಕ್ನೋಪ್ರೊ ಕಂಪನಿಯ ಅಂಗಸಂಸ್ಥೆಯಾಗಲಿದೆ.
ಟೆಕ್ನೋಪ್ರೊ ಹೋಲ್ಡಿಂಗ್ಸ್ ನ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿರುವ ವಿವರಗಳಂತೆ ಮೊದಲ ಹಂತದಲ್ಲಿ ಶೇರುಗಳ ಖರೀದಿ ಮೌಲ್ಯ ಸುಮಾರು 580 ಕೋ.ರೂ.ಗಳಾಗಿರುತ್ತವೆ. ಸಿಇಒ ರವಿತೇಜ ಬೊಮ್ಮಿರೆಡ್ಡಿಪಲ್ಲಿ ನೇತೃತ್ವದ ಹಾಲಿ ನಿರ್ವಹಣಾ ತಂಡವೇ ರೋಬೋಸಾಫ್ಟ್ ಅನ್ನು ಮುನ್ನಡೆಸಲಿದೆ. ಬೊಮ್ಮಿರೆಡ್ಡಿಪಲ್ಲಿ ಅವರು ಆಡಳಿತ ನಿರ್ದೇಶಕ ಮತ್ತು ಸಿಇಒ ಆಗಿ ಪದೋನ್ನತಿಯನ್ನೂ ಪಡೆಯಲಿದ್ದಾರೆ.
1996ರಲ್ಲಿ ಸಾಫ್ಟ್ ವೇರ್ ಅಭಿವೃದ್ಧಿ ಸಂಸ್ಥೆಯಾಗಿ ಆರಂಭಗೊಂಡಿದ್ದ ರೋಬೋಸಾಫ್ಟ್ 2008ರ ವೇಳೆಗೆ ಮೊಬೈಲ್ ಆ್ಯಪ್ ಅಭಿವೃದ್ಧಿ ಸೇವೆಯನ್ನು ನೀಡುವ ಮುಂಚೂಣಿಯ ಕಂಪನಿಗಳಲ್ಲೊಂದಾಗಿ ಬೆಳೆದಿತ್ತು. ಉಡುಪಿಯಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಅದು ಮುಂಬೈ ಮತ್ತು ಬೆಂಗಳೂರುಗಳಲ್ಲಿ ಡೆಲಿವರಿ ಸೆಂಟರ್ಗಳನ್ನು ಹಾಗೂ ಅಮೆರಿಕ ಮತ್ತು ಜಪಾನ್ ಗಳಲ್ಲಿ ಮಾರಾಟ ಕಚೇರಿಗಳನ್ನು ಹೊಂದಿದೆ. ಸುಮಾರು 1,000 ಉದ್ಯೋಗಿಗಳನ್ನು ಹೊಂದಿರುವ ಕಂಪನಿಯು ಅಮೆರಿಕ, ಜಪಾನ್, ಯುರೋಪ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ(ಇಎಂಇಎ) ಹಾಗೂ ಭಾರತದಲ್ಲಿನ ಗ್ರಾಹಕರಿಗೆ ಸೇವೆಗಳನ್ನು ಒದಗಿಸುತ್ತಿದೆ.
ಅಸೆಂಟ್ ಕ್ಯಾಪಿಟಲ್, ಕಲಾರಿ ಕ್ಯಾಪಿಟಲ್ ಮತ್ತು ಕಂಪನಿಯ ಪ್ರವರ್ತಕರು ಹಾಗೂ ಅಧಿಕಾರಿಗಳು ಸೇರಿದಂತೆ 15 ವ್ಯಕ್ತಿಗಳು ರೋಬೋಸಾಫ್ಟ್ ನ ಪ್ರಮುಖ ಶೇರುದಾರರಾಗಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಕಂಪನಿಯು ಅದ್ಭುತ ಬೆಳವಣಿಗೆಯನ್ನು ಸಾಧಿಸಿದೆ ಎಂದು ಹೇಳಿರುವ ರೋಬೋಸಾಫ್ಟ್ ನ ಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ರೋಹಿತ್ ಭಟ್ ಅವರು,‘ಅಸೆಂಟ್ ಕ್ಯಾಪಿಟಲ್ ಮತ್ತು ಕಲಾರಿ ಕ್ಯಾಪಿಟಲ್ ಜೊತೆ ನಮ್ಮ ಸಹಭಾಗಿತ್ವವು ನಮ್ಮ ಅದ್ಭುತ ಬೆಳವಣಿಗೆ ಯುಗಕ್ಕೆ ನಾಂದಿ ಹಾಡಿತ್ತು. ಟೆಕ್ನೋಪ್ರೊದಂತಹ ಜಾಗತಿಕ ಸಂಸ್ಥೆಗೆ ಕಂಪನಿಯನ್ನು ಹಸ್ತಾಂತರಿಸುತ್ತಿರುವುದು ನಮಗೆ ಅತೀವ ಹರ್ಷವನ್ನು ನೀಡಿದೆ’ಎಂದು ತಿಳಿಸಿದ್ದಾರೆ.
ಡಿಜಿಟಲ್ ಟ್ರಾನ್ಸ್ಫಾರ್ಮೇಷನ್ ಕ್ಷೇತ್ರದಲ್ಲಿ ಆವಿಷ್ಕಾರಿ ನಾಯಕ ಎಂಬ ಹೆಗ್ಗಳಿಕೆ ಹೊಂದಿರುವ ರೋಬೋಸಾಫ್ಟ್ ನಲ್ಲಿ ಹೂಡಿಕೆಯನ್ನು ಮಾಡುತ್ತಿರುವುದು ಸಂತಸವನ್ನು ತಂದಿದೆ ಎಂದು ಟೆಕ್ನೊಪ್ರೊ ಅಧ್ಯಕ್ಷ ಮತ್ತು ಸಿಇಒ ತಾಕೆಶಿ ಯಾಗಿ ಅವರು ಹೇಳಿದ್ದಾರೆ.







