ವೈದ್ಯಕೀಯ ಕೋರ್ಸ್ ಗೆ ಸೇರುವ ವಿಷಯದ ಕುರಿತು ಜಗಳ: ತಾಯಿಯನ್ನೇ ಹತ್ಯೆಗೈದ ಪುತ್ರಿ

ಮುಂಬೈ, ಆ. 10: ವೈದ್ಯಕೀಯ ಕೋರ್ಸ್ ಸೇರುವ ವಿಚಾರದಲ್ಲಿ 15 ವರ್ಷದ ಬಾಲಕಿಯೋರ್ವಳು ತನ್ನ ತಾಯಿಯೊಂದಿಗೆ ಜಗಳವಾಡಿ, ಬಳಿಕ ಕರಾಟೆ ಬೆಲ್ಟ್ ನಿಂದ ಆಕೆಯ ಕುತ್ತಿಗೆಗೆ ಬಿಗಿದು ಹತ್ಯೆಗೈದ ಘಟನೆ ನವಿ ಮುಂಬೈಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನವಿ ಮುಂಬೈಯ ಐರೋಲಿ ಪ್ರದೇಶದಲ್ಲಿ ಜುಲೈ 30ರಂದು ಈ ಘಟನೆ ನಡೆದಿದೆ. ಅನಂತರ ಇದು ಆಕಸ್ಮಿಕವಾಗಿ ನಡೆದ ಘಟನೆ ಎಂದು ಹೇಳಲು ಬಾಲಕಿ ಪ್ರಯತ್ನಿಸಿದ್ದಾಳೆ ಪೊಲೀಸರು ತಿಳಿಸಿದ್ದಾರೆ.
ವೈದ್ಯಕೀಯ ಕೋರ್ಸ್ ಸೇರುವ ವಿಚಾರದಲ್ಲಿ ಬಾಲಕಿ ಹಾಗೂ ಆಕೆಯ 40 ವರ್ಷದ ತಾಯಿಯ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಮಗಳು ವೈದ್ಯಕೀಯ ಓದಬೇಕು ಎಂದು ತಾಯಿ ಬಯಸಿದ್ದರು. ಆದರೆ, ವೈದ್ಯಕೀಯ ಓದುವುದು ಮಗಳಿಗೆ ಇಷ್ಟವಿರಲಿಲ್ಲ. ಇದರಿಂದ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ರಬಾಲೆ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಬಾಲಕಿ ಕಳೆದ ತಿಂಗಳು ತನ್ನ ತಾಯಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪೊಲೀಸರು ಬಾಲಕಿಯ ಕುಟುಂಬದ ಸದಸ್ಯರನ್ನು ಠಾಣೆಗೆ ಕರೆಸಿ ಮಾತುಕತೆ ನಡೆಸಿ ಕಳುಹಿಸಿಕೊಟ್ಟಿದ್ದರು. ಅನಂತರ ಜುಲೈ 30ರಂದು ಬಾಲಕಿ, ತನ್ನ ತಾಯಿ ಮೇಲಿನಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ಪೊಲೀಸರಿಗೆ ತಿಳಿಸಿದ್ದಳು.
ಮಹಿಳೆಯ ಮೃತದೇಹವನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಮಹಿಳೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂತು ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ವೇಳೆ ಬಾಲಕಿ, ತಾಯಿಯೊಂದಿಗೆ ಜಗಳವಾಡಿದ ಬಳಿಕ, ಕರಾಟೆ ಬೆಲ್ಟ್ ನಿಂದ ಕುತ್ತಿಗೆಗೆ ಬಿಗಿದು ಆಕೆಯನ್ನು ಹತ್ಯೆಗೈದೆ ಎಂದು ಹೇಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.







