-ವಿ.ಎನ್. ಲಕ್ಷ್ಮೀನಾರಾಯಣ, ಮೈಸೂರು
ಮಾನ್ಯರೇ,
ಕರ್ನಾಟಕದ ಈಗಿನ ಮುಖ್ಯಮಂತ್ರಿ ಪ್ರಕಟಿಸಿರುವ ರೈತ ಕುಟುಂಬದಿಂದ ಬಂದ ವಿದ್ಯಾರ್ಥಿಗಳಿಗಾಗಿ ವಿಶೇಷ ಶಿಷ್ಯವೇತನದ ಯೋಜನೆ ಸ್ವಾಗತಾರ್ಹ. ಆದರೆ ಈ ವಿಶೇಷ ಶಿಷ್ಯವೇತನಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಬಳಸಲು ವಿಧಿಸಿರುವ ಜಮೀನು ಒಡೆತನದ ಮಾನದಂಡ ಮಾತ್ರ ಎಲ್ಲ ದೃಷ್ಟಿಯಿಂದಲೂ ಅವೈಜ್ಞಾನಿಕ ಮತ್ತು ಅಸಮಂಜಸವಾಗಿದೆ. ಏಕೆಂದರೆ, ಈಗಿರುವ ಭೂ ಒಡೆತನ ಮತ್ತು ಕೃಷಿ ಆದಾಯದ ಮೂಲದ ಹಿನ್ನೆಲೆಯಲ್ಲಿ ಭೂಹೀನ (ಮಹಿಳೆ ಮತ್ತು ಪುರುಷ) ಕೃಷಿ ಕಾರ್ಮಿಕರು ಮತ್ತು ಇತರರ ಭೂಮಿಯಲ್ಲಿ ಗುತ್ತಿಗೆ ಕೃಷಿ ಮಾಡುತ್ತಿರುವ ಭೂ ಒಡೆತನವಿಲ್ಲದ ಕೃಷಿಕರೇ ನಿಜವಾದ ರೈತರಾಗಿದ್ದಾರೆ. ಅಲ್ಲದೆ, ಅಂತಹವರಲ್ಲಿ ಕೆಲವರಿಗೆ ತುಂಡು ಭೂಮಿಯ ಒಡೆತನವಿದ್ದಾಗ್ಯೂ ಅದು ಬಹುತೇಕವಾಗಿ ಕುಟುಂಬದ ಪುರುಷರ ಹೆಸರಿನಲ್ಲಿ ಇರುತ್ತದೆ. ಹೀಗಾಗಿ ರೈತರಾಗಿದ್ದೂ ಭೂ ಒಡೆತನ ಇಲ್ಲದ ಸಾವಿರಾರು ಒಂಟಿ ಮಹಿಳೆಯರು, ವಿಧವೆಯರು ಮತ್ತು ನಿರ್ಗತಿಕ ಮಹಿಳೆಯರ ಮಕ್ಕಳು ಈ ಜಮೀನು ಒಡೆತನದ ಮಾನದಂಡದಿಂದಾಗಿ ವಿಶೇಷ ಶಿಷ್ಯವೇತನದಿಂದ ವಂಚಿತರಾಗುತ್ತಾರೆ. ಜೊತೆಗೆ, ಭ್ರಷ್ಟ ರೆವಿನ್ಯೂ ಅಧಿಕಾರಿಗಳಿಂದಾಗಿ ಆರ್ಥಿಕವಾಗಿ ಸಬಲರಾಗಿರುವವರೇ ಜಮೀನು ಒಡೆತನದ ಬಲದಿಂದ ನಿರ್ಬಲರೆಂದು ಗುರುತಿಸಲ್ಪಟ್ಟು ಶಿಷ್ಯವೇತನ ಸೌಲಭ್ಯದ ಸಿಂಹ ಪಾಲನ್ನು ಉಳ್ಳವರೇ ಕಬಳಿಸುವ ಅಪಾಯವೂ ಇದೆ. ಆದ್ದರಿಂದ ಭೂ ಒಡೆತನದ ಮಾನದಂಡವನ್ನು ಕೈಬಿಟ್ಟು, ಕೃಷಿಕರಾಗಿರುವ ಎಲ್ಲಾ ಅರ್ಹ ರೈತ ಮಕ್ಕಳನ್ನು ವಿಶೇಷ ಶಿಷ್ಯವೇತನಕ್ಕಾಗಿ ಪರಿಗಣಿಸುವುದು ಸರಿಯಾದ ಕ್ರ.ಮ.





