ಮೇಲ್ನೋಟಕ್ಕೆ ಟ್ವೀಟರ್ ಹೊಸ ಐಟಿ ನಿಯಮಗಳನ್ನು ಅನುಸರಿಸಿದೆ: ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ಕೇಂದ್ರ ಸರಕಾರ ಮಾಹಿತಿ
ಹೊಸದಿಲ್ಲಿ, ಆ. 10: ಮುಖ್ಯ ಅನುಸರಣಾ ಅಧಿಕಾರಿ (ಸಿಸಿಒ), ನಿವಾಸಿ ಅಹವಾಲು ಅಧಿಕಾರಿ (ಆರ್ಜಿಒ) ಹಾಗೂ ನೋಡಲ್ ಸಂಪರ್ಕ ವ್ಯಕ್ತಿಯನ್ನು ಖಾಯಂ ಆಧಾರದಲ್ಲಿ ನೇಮಕ ಮಾಡುವ ಮೂಲಕ ಟ್ವಿಟರ್ ನೂತನ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳನ್ನು ಮೇಲ್ನೋಟಕ್ಕೆ ಅನುಸರಿಸಿದೆ ಎಂದು ಕೇಂದ್ರ ಸರಕಾರ ಮಂಗಳವಾರ ಉಚ್ಚ ನ್ಯಾಯಾಲಯಕ್ಕೆ ತಿಳಿಸಿತು.
ಮಾಹಿತಿ ತಂತ್ರಜ್ಞಾನದ ನಿಯಮಗಳನ್ನು ಟ್ವಿಟರ್ ಪಾಲಿಸುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಲಾದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರೇಖಾ ಪಳ್ಳಿ, ಈ ಹಿನ್ನೆಲೆಯಲ್ಲಿ ಹೊಸ ಬೆಳವಣಿಗೆಯ ಬಗ್ಗೆ ಎರಡು ವಾರಗಳ ಒಳಗೆ ಅಫಿಡಾವಿಟ್ ಸಲ್ಲಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿತು. ಅಲ್ಲದೆ, ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 5ಕ್ಕೆ ಮುಂದೂಡಿತು.
ಮೇಲ್ನೋಟಕ್ಕೆ ಟ್ವಿಟರ್ ಇತ್ತೀಚೆಗೆ ತಿದ್ದುಪಡಿ ಮಾಡಲಾದ ಐಟಿ ನಿಯಮಾನುಸಾರು ಮುಖ್ಯ ಅನುಸರಣಾ ಅಧಿಕಾರಿ, ನೋಡಲ್ ಸಂಪರ್ಕ ವ್ಯಕ್ತಿ (ಎನ್ಸಿಪಿ) ಹಾಗೂ ನಿವಾಸಿ ಅಹವಾಲು ಅಧಿಕಾರಿಯನ್ನು ಕಾನೂನಿಗೆ ಅನುಗುಣವಾಗಿ ನಿಯೋಜಿಸಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರು ನ್ಯಾಯಮೂರ್ತಿ ರೇಖಾ ಪಳ್ಳಿ ಅವರಿಗೆ ತಿಳಿಸಿದರು. ಈ ಸಂಬಂಧ ಅಫಿಡಾವಿಟ್ ಸಲ್ಲಿಸಲು ಕಾಲಾವಕಾಶವನ್ನು ಚೇತನ್ ಶರ್ಮಾ ಕೋರಿದರು.





