ಖಾತೆ ಹಂಚಿಕೆ ಅಸಮಾಧಾನ: ವರಿಷ್ಟರು ಯಾವುದೇ ಸೂಚನೆ ನೀಡಿಲ್ಲ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಆ. 11: `ಖಾತೆ ಹಂಚಿಕೆ ಕುರಿತು ಕೆಲವರ ಅಸಮಾಧಾನಕ್ಕೆ ಸಂಬಂಧಿಸಿದಂತೆ ವರಿಷ್ಟರು ಈ ಕ್ಷಣದವರೆಗೂ ಯಾವುದೇ ಸೂಚನೆ ನೀಡಿಲ್ಲ. ಸಚಿವ ಆನಂದ್ ಸಿಂಗ್ ಅವರು ಇಂದೇ ಆಗಮಿಸಲು ಸೂಚನೆ ನೀಡಿದ್ದು, ಅವರೊಂದಿಗೆ ಚರ್ಚಿಸಿ ಆ ಬಳಿಕ ಅವರ ಭಾವನೆಗಳ ಬಗ್ಗೆ ಹೈಕಮಾಂಡ್ ಜೊತೆ ಸಮಾಲೋಚನೆ ನಡೆಸಲಿದ್ದೇನೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬುಧವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಸಚಿವ ಆನಂದ ಸಿಂಗ್ ಅವರೊಂದಿಗೆ ನಾನು ನಿರಂತರವಾಗಿ ಸಂಪರ್ಕದಲ್ಲಿದ್ದು, ಮಾತುಕತೆ ನಡೆಸುತ್ತಿದ್ದೇನೆ. ಅವರ ಭಾವನೆಗಳನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಅವರು ಬೆಂಗಳೂರಿಗೆ ಬಂದ ನಂತರ ಅವರೊಂದಿಗೆ ಮಾತನಾಡುತ್ತೇನೆ. ಯಾವುದೋ ಒಂದು ಭಾವನಾತ್ಮಕ ಗಳಿಗೆಯಲ್ಲಿ ತಮ್ಮ ವಿಚಾರಗಳನ್ನು ಹೇಳಿದ್ದಾರೆ' ಎಂದು ಪ್ರತಿಕ್ರಿಯಿಸಿದರು.
`ಶಾಂತವಾಗಿ ಕುಳಿತು ಮಾತನಾಡಿ ಅವರ ಎಲ್ಲ ವಿಚಾರಗಳನ್ನು ಸಮಗ್ರವಾಗಿ ಚರ್ಚಿಸುತ್ತೇವೆ. ನಾನೊಬ್ಬನೇ ಅಲ್ಲ, ನಮ್ಮ ಪಕ್ಷವಿದೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿದ್ದಾರೆ. ಸಿಂಗ್ ಅವರ ಸ್ನೇಹಿತರು ಮಾತನಾಡಿದ್ದಾರೆ. ನಮ್ಮದು ಒಂದು ರಾಷ್ಟ್ರೀಯ ಪಕ್ಷ. ಪಕ್ಷದ ವರಿಷ್ಟರು ಅವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಎಲ್ಲರೂ ಚರ್ಚಿಸಿದ ಬಳಿಕ ಅವರಿಗೆ ಒಳ್ಳೆಯ ಮಾರ್ಗ ಸಿಗಲಿದೆ' ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.
ಆನಂದ್ ಸಿಂಗ್ ಅವರ ಬೇಡಿಕೆ ಬಗ್ಗೆ ಸಂಪೂರ್ಣವಾಗಿ ನಾವು, ವರಿಷ್ಟರು ಮಾತನಾಡಬೇಕಿದೆ. ಅವರು ನಾಳೆ ಬೆಂಗಳೂರಿಗೆ ಬರಬೇಕಾಗಿತ್ತು. ಆದರೆ, ನಾನು ನಾಳೆ ಮಂಗಳೂರು ಪ್ರವಾಸದ ಕಾರಣ ಸಾಧ್ಯವಾದರೆ ಇಂದು ಬನ್ನಿ ಇಲ್ಲದಿದ್ದಲ್ಲಿ ನಾಡಿದ್ದು ಬನ್ನಿ ಎಂದಿದ್ದೇನೆ. ಆದರೆ, ಅವರು ಇಂದು ಸಂಜೆಯೇ ಆಗಮಿಸುವ ಸಾಧ್ಯತೆಗಳಿವೆ. ಮಾತುಕತೆ ಬಳಿಕ ಎಲ್ಲವೂ ಸರಿಯಾಗಲಿದೆ ಎಂದು ನುಡಿದರು.







