370ನೇ ವಿಧಿ ರದ್ದತಿ ಪ್ರಶ್ನಿಸಿ ಲಡಾಖ್‍ನ ಇಬ್ಬರು ರಾಜಕಾರಣಿಗಳು, ಪತ್ರಕರ್ತನಿಂದ ಸುಪ್ರೀಂ ಕೋರ್ಟ್ ಗೆ ಮೊರೆ

ಹೊಸದಿಲ್ಲಿ: ಸಂವಿಧಾನದ 370ನೇ ವಿಧಿ ರದ್ದುಗೊಳಿಸಿ ಜಮ್ಮು ಕಾಶ್ಮೀರವನ್ನು ಕೇಂದ್ರಾಡಳಿತ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂದು ವಿಭಜಿಸಿದ ಕೇಂದ್ರ ಸರಕಾರದ 2019 ಕ್ರಮವನ್ನು ಪ್ರಶ್ನಿಸಿ ಈಗಾಗಲೇ ಸಲ್ಲಿಸಲಾಗಿರುವ ಅಪೀಲುಗಳಲ್ಲಿ ಮಧ್ಯಪ್ರವೇಶಕ್ಕೆ ಅನುಮತಿ ಕೋರಿ ಲಡಾಖ್‍ನ ಇಬ್ಬರು ರಾಜಕಾರಣಿಗಳಾದ ಖಮರ್ ಆಲಿ ಅಖೂನ್ ಹಾಗೂ ಅಸ್ಗರ್ ಆಲಿ ಕರ್ಬಲಾಯಿ ಮತ್ತು ಪತ್ರಕರ್ತ ಸಜ್ಜದ್ ಹುಸೈನ್ ಅವರು ಅರ್ಜಿ ಸಲ್ಲಿಸಿದ್ದಾರೆ.
ಜಮ್ಮು ಕಾಶ್ಮೀರ ವಿಧಾನಸಭೆ ವಿಸರ್ಜನೆಯ ಮೊದಲು ಕಾರ್ಗಿಲ್ ಕ್ಷೇತ್ರವನ್ನು ಅಖೂನ್ ಪ್ರತಿನಿಧಿಸುತ್ತಿದ್ದರೆ, ಕರ್ಬಲಾಯಿ ಅವರು ಲಡಾಖ್‍ನ ಕಾರ್ಗಿಲ್ ಜಿಲ್ಲೆಯ ಕಾಂಗ್ರೆಸ್ ನಾಯಕರಾಗಿದ್ದು ಹುಸೈನ್ ಅವರು ಗ್ರೇಟರ್ ಲಡಾಖ್ ಪತ್ರಿಕೆಯ ಸಂಪಾದಕರಾಗಿದ್ದಾರೆ.
ಕೇಂದ್ರದ ಕ್ರಮವನ್ನು ಪ್ರಶ್ನಿಸಿ 2019ರಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನಾಯಕರುಗಳಾದ ಹಾಗೂ ಸಂಸದರಾದ ಮೊಹಮ್ಮದ್ ಅಕ್ಬರ್ ಲೋನೆ ಹಾಗೂ ನಿವೃತ್ತ ನ್ಯಾಯಾಧೀಶ ಹಸ್ನೈನ್ ಮಸೂದಿ ಅರ್ಜಿ ಸಲ್ಲಿಸಿದ್ದರು.
ಕೇಂದ್ರದ ಕ್ರಮವನ್ನು ಅಕ್ರಮ ಹಾಗೂ ಅಸಂವಿಧಾನಿಕ ಎಂದು ಘೋಷಿಸುವಂತೆ ಅವರು ಮನವಿ ಮಾಡಿದ್ದರು.
ಜಮ್ಮು ಕಾಶ್ಮೀರ ಜನರ ಸಂವಿಧಾನಿಕ ಹಕ್ಕುಗಳನ್ನು ಕೇಂದ್ರದ ಕ್ರಮ ಸೆಳೆದಿದೆ ಎಂದು ಇದೀಗ ಸಲ್ಲಿಸಲಾಗಿರುವ ಅಪೀಲಿನಲ್ಲಿ ಲಡಾಖ್‍ನ ಇಬ್ಬರು ರಾಜಕಾರಣಿಗಳು ಹಾಗೂ ಒಬ್ಬ ಪತ್ರಕರ್ತ ಹೇಳಿದ್ದಾರೆ. ಜನರಿಂದ ಅಧಿಕಾರ ಪಡೆಯದ ಆಡಳಿತಗಾರರ ಆಳ್ವಿಕೆಯಲ್ಲಿ ಈಗ ಪ್ರದೇಶದ ಜನರು ಇರುವಂತಾಗಿದೆ ಎಂದೂ ಅವರು ಹೇಳಿದ್ದಾರೆ.







