ಲೋಕಸಭಾ ಅಧಿವೇಶನ ಹಠಾತ್ ಅಂತ್ಯದ ನಂತರ ಸ್ಪೀಕರ್ ಸಭೆಯಲ್ಲಿ ಹಾಜರಾದ ಪ್ರಧಾನಿ ಮೋದಿ, ಸೋನಿಯಾ ಗಾಂಧಿ

photo: ANI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಂಸತ್ತಿನಲ್ಲಿ ಸ್ಪೀಕರ್ ಓಂ ಬಿರ್ಲಾ ಅವರ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಹಾಜರಾದರು. ಸ್ಪೀಕರ್ ಬಿರ್ಲಾ ಅವರು ಲೋಕಸಭೆಯನ್ನು ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಿದ ನಂತರ ವಿವಿಧ ಪಕ್ಷಗಳ ನಾಯಕರನ್ನು ಭೇಟಿಯಾದರು.
ಪ್ರಧಾನಿ ಮೋದಿ ಹಾಗೂ ಸೋನಿಯಾ ಗಾಂಧಿ ಸ್ಪೀಕರ್ ಕೊಠಡಿಯಲ್ಲಿ ಅಕ್ಕಪಕ್ಕದ ಸೋಫಾಗಳಲ್ಲಿ ಕುಳಿತಿದ್ದರು. ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ನ ಲೋಕಸಭಾ ನಾಯಕ ಅಧೀರ್ ರಂಜನ್ ಚೌಧರಿ , ತೃಣಮೂಲ ಕಾಂಗ್ರೆಸ್, ಅಕಾಲಿ ದಳ, ವೈಎಸ್ಆರ್ ಕಾಂಗ್ರೆಸ್ ಹಾಗೂ ಬಿಜೆಡಿ ನಾಯಕರೂ ಹಾಜರಿದ್ದರು.
ಲೋಕಸಭೆಯು ವೇಳಾಪಟ್ಟಿಗಿಂತ ಎರಡು ದಿನಗಳ ಮೊದಲು ಇಂದು ಕೊನೆಗೊಂಡಿತು. ಅಧಿವೇಶನದ ಮುಕ್ತಾಯದ ನಂತರ ಸಭೆ ನಡೆಸುವುದು ರೂಢಿಯಲ್ಲಿದೆ.
ಚರ್ಚೆಯನ್ನು ಪ್ರೋತ್ಸಾಹಿಸುವಂತೆ ಬಿರ್ಲಾ ಅವರು ಎಲ್ಲಾ ನಾಯಕರನ್ನು ಒತ್ತಾಯಿಸಿದರು. ಇದು ಜನರ ಸೇವೆಗೆ ಏಕೈಕ ಮಾರ್ಗವಾಗಿದೆ ಎಂದು ಒತ್ತಿ ಹೇಳಿದರು.
ಪೆಗಾಸಸ್ ಗೂಢಚರ್ಯೆ ಪ್ರಕರಣ, ಇಂಧನ ಬೆಲೆಗಳು ಹಾಗೂ ಕೋವಿಡ್ ಬಿಕ್ಕಟ್ಟು ಸೇರಿದಂತೆ ಹಲವು ವಿಷಯಗಳ ಬಗ್ಗೆ ವಿರೋಧ ಪಕ್ಷಗಳು ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸಿದ್ದವು.







