ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಪಠ್ಯದೊಂದಿಗೆ ತರಗತಿಗಳ ಆರಂಭ : ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್

ಮಣಿಪಾಲ, ಆ.11: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜು ಕೇಶನ್(ಮಾಹೆ) 2020ರ ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ಪಠ್ಯ ವಿಷಯಗಳನ್ನು ರಚಿಸಲಾಗಿದ್ದು, ಕೋವಿಡ್ ಸವಾಲಿನ ಮಧ್ಯೆ ತರಗತಿಗಳನ್ನು ಆರಂಭಿಸಲು ಎಲ್ಲ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ ಎಂದು ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ತಿಳಿಸಿದ್ದಾರೆ.
ಮಣಿಪಾಲದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯವನ್ನು ಪ್ರಕಟಿಸಿದರು. 72 ಗಂಟೆಗಳ ಆರ್‌ಟಿಪಿಸಿಆರ್ ನೆಗೆಟಿವ್ ಪ್ರಮಾಣ ಪತ್ರ, ಮೊದಲ ಡೋಸ್ ಪಡೆದ ದಾಖಲೆ, ಮಾಸ್ಕ್ ಧಾರಣೆ, ಕ್ವಾರಂಟೈನ್ ಸಹಿತ ವಿವಿಧ ಷರತ್ತುಗಳೊಂದಿಗೆ ತರಗತಿಗಳು ಆರಂಭವಾಗಲಿವೆ. ಸೆಪ್ಟೆಂಬರ್‌ನಲ್ಲಿ ತಾಂತ್ರಿಕ ಕೋರ್ಸುಗಳ ತರಗತಿಗಳನ್ನು ಹಂತಹಂತವಾಗಿ ಆರಂಭಿಸಲಾಗುವುದು. ಆರೋಗ್ಯ ವಿಜ್ಞಾನಗಳ ಕೋರ್ಸುಗಳ ತರಗತಿಗಳು ಈಗಾಗಲೇ ನಡೆಯುತ್ತಿದೆ ಎಂದರು.
ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್ ಮಾತನಾಡಿ, ಕೊರೊನಾ ಸೋಂಕಿನಿಂದ ಪೋಷಕರನ್ನು ಕಳೆದು ಕೊಂಡ ಸುಮಾರು 40 ವಿದ್ಯಾರ್ಥಿಗಳ ಶುಲ್ಕವನ್ನು ಮನ್ನಾ ಮಾಡಲಾಗಿದೆ. ಮಾಹೆಯ ಶೇ.90ರಷ್ಟು ವಿದ್ಯಾರ್ಥಿಗಳು, ಸಿಬಂದಿಗಳಿಗೆ ಉಚಿತ ವಾಗಿ ಮೊದಲ ಡೋಸ್ ನೀಡಲಾಗಿದೆ. ಎಲ್ಲ ಸಿಬಂದಿಗಳಿಗೂ ಪೂರ್ಣಪ್ರಮಾಣದಲ್ಲಿ ವೇತನವನ್ನು ಪಾವತಿಸಲಾಗಿದೆ ಎಂದು ಹೇಳಿದರು.
ಮಾಹೆಯ ವಿವಿಧ ಕ್ಯಾಂಪಸ್‌ಗಳಲ್ಲಿ ಮುಂದಿನ ಐದು ವರ್ಷದೊಳಗೆ ಸುಮಾರು 1,000 ಕೋ.ರೂ. ವೆಚ್ಚದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸ ಲಾಗುವುದು. ಬೆಂಗಳೂರಿನ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಐದು ಕೋರ್ಸು ಗಳನ್ನು ಆರಂಭಿಸಲಾಗುವುದು. ಜೆಮ್‌ಶೆಡ್ಪುರದಲ್ಲಿ ಟಾಟಾ ಸಂಸ್ಥೆ ಜತೆ ಮಾಹೆ ಆರಂಭಿಸುವ ವೈದ್ಯಕೀಯ ಕಾಲೇಜಿಗೆ ಮೂರು ವರ್ಷಗಳಲ್ಲಿ 300 ಕೋ.ರೂ. ಖರ್ಚು ಮಾಡಲಾಗುವುದು. ಅಲ್ಲದೆ ಮಣಿಪಾಲ, ಮಂಗಳೂರು ಕ್ಯಾಂಪಸ್ ಗಳಲ್ಲಿ ಹೊಸ ಕೋರ್ ಗಳು ಆರಂಭವಾಗಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಹೆ ಕುಲಸಚಿವ ಡಾ.ನಾರಾಯಣ ಸಭಾಹಿತ್, ಸಾರ್ವಜನಿಕ ಸಂಪರ್ಕ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ವಿಭಾಗದ ನಿರ್ದೇಶಕ ಎಸ್.ಪಿ.ಕಾರ್ ಉಪಸ್ಥಿತರಿದ್ದರು.
ಮುಂದಿನ ವರ್ಷ ಟ್ಯಾಪ್ಮಿ ಮಾಹೆ ಅಧೀನಕ್ಕೆ
ಮಣಿಪಾಲದ ಟಿ.ಎ.ಪೈ ಮೆನೇಜ್ಮೆಂಟ್ ಇನ್‌ಸ್ಟಿಟ್ಯೂಟ್ ಇನ್ನು ಮುಂದೆ ಮಾಹೆ ಅಧೀನಕ್ಕೆ ಒಳಪಡಲಿದೆ. ಮುಂದಿನ ವರ್ಷದಿಂದ ಮಾಹೆಯಲ್ಲಿ ನೋಂದಾಣಿ ಕಾರ್ಯ ನಡೆಸಿ, ಪ್ರಮಾಣಪತ್ರವನ್ನು ಕೂಡ ಮಾಹೆಯೇ ನೀಡಲಿದೆ. ಈ ಹಿನ್ನೆಲೆಯಲ್ಲಿ ಮಾಹೆ ಅಧೀನದಲ್ಲಿದ್ದ ಮಣಿಪಾಲ್ ಇನ್ ಸ್ಟಿಟ್ಯೂಟ್ ಆಫ್ ಮೆನೇಜ್ಮೆಂಟ್ ಕೋರ್ಸ್‌ಗಳನ್ನು ರದ್ದುಗೊಳಿಸಲಾಗುವುದು ಎಂದು ಡಾ.ಎಚ್.ಎಸ್.ಬಲ್ಲಾಳ್ ತಿಳಿಸಿದರು.
ಭಾರತ ಸರಕಾರದಿಂದ ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಮಾನ್ಯತೆ ಪಡೆದು ಕೊಂಡಿರುವ ಮಣಿಪಾಲ ಮಾಹೆಯು 2025-26ರಲ್ಲಿ ಜಗತ್ತಿನ ಶ್ರೇಷ್ಠ 500 ವಿವಿಗಳಲ್ಲಿ ಮತ್ತು 2028-29ರಲ್ಲಿ ಜಗತ್ತಿನ ಶ್ರೇಷ್ಠ 200 ವಿ.ವಿ.ಗಳಲ್ಲಿ ಒಂದಾಗಿ ಹೊರಹೊಮ್ಮಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.







