ಬೆಂಗಳೂರು: ನಾಯಿಗಳು ತಾಜ್ಯ ವಿಸರ್ಜಿಸಿದರೆ ಮಾಲಕರಿಗೆ 500 ರೂ.ದಂಡ

ಬೆಂಗಳೂರು, ಆ.11: ಬಿಬಿಎಂಪಿ ವ್ಯಾಪ್ತಿಯ ಕೆರೆ ವ್ಯಾಪ್ತಿಯಲ್ಲಿ ಕೆಲ ಸಾರ್ವಜನಿಕರು ನಾಯಿಯನ್ನು ಹಿಡಿದು ತರುತ್ತಿದ್ದು, ಒಂದು ವೇಳೆ ತ್ಯಾಜ್ಯ ವಿಸರ್ಜಿಸಿದರೆ 500 ರೂ. ದಂಡ ಹಾಕಲಾಗುವುದು ಎಂದು ಬಿಬಿಎಂಪಿ ಎಚ್ಚರಿಕೆ ನೀಡಿದೆ.
ಈ ಕುರಿತು ಸುತ್ತೋಲೆ ಹೊರಡಿಸಿರುವ ಪಾಲಿಕೆ, ಸಾರ್ವಜನಿಕರು ಸಾಕು ಪ್ರಾಣಿಗಳನ್ನು ತೆಗೆದುಕೊಂಡು ಬರುವವರು ಸೂಕ್ತ ಕ್ರಮಗಳನ್ನು ಅನುಸರಿಸಬೇಕು. ಇಲ್ಲದಿದ್ದರೆ, ದಂಡ ವಸೂಲಿ ಮಾಡಲಾಗುವುದು ಎಂದು ಹೇಳಿದೆ.
ಕೆರೆಗಳಲ್ಲಿನ ಆವರಣದಲ್ಲಿ ಅಭಿವೃದ್ಧಿ ಪಡಿಸಿರುವ ಸ್ಥಳಗಳಲ್ಲಿ ಪ್ರವೇಶಿಸಲು ಸಾಕುನಾಯಿಗಳಿಗೆ ಸರಪಳಿ ಬಾಯಿಗೆ ಕುಕ್ಕೆ ಹಾಕಿ ಮಾಲಕರು ಸರಪಳಿಗಳನ್ನು ಕೈಯಲ್ಲಿ ಹಿಡಿದುಕೊಂಡು ಪ್ರವೇಶಿಸಬೇಕು. ಜತೆಗೆ, ಸಾಕು ನಾಯಿಗಳಿಗೆ ಕಡ್ಡಾಯವಾಗಿ ರೇಬಿಸ್ ರೋಗದ ವಿರುದ್ಧ ಲಸಿಕೆ ಹಾಕಿಸಿರಬೇಕು.
ಅದೇರೀತಿ, ಸಾಕು ನಾಯಿಗಳು ತ್ಯಾಜ್ಯ ವಿಸರ್ಜನೆ ಮಾಡದಂತೆ ಮಾಲಕರು ಕ್ರಮವಹಿಸಬೇಕು. ಒಂದು ವೇಳೆ ಮಾಡಿದ್ದಲ್ಲಿ, ವಿಸರ್ಜನೆ ಮಾಡಿದ ಸ್ಥಳವನ್ನು ಸ್ವಚ್ಛಗೊಳಿಸಬೇಕು ಇಲ್ಲದಿದ್ದಲ್ಲಿ 500 ರೂ. ದಂಡವಾಗಿ ಪಾವತಿಸಬೇಕಾಗಿದೆ ಎಂದು ಪಾಲಿಕೆ ಹೇಳಿದೆ.
ಸಾಕು ನಾಯಿಗಳಿಗೆ ಕೆರೆಗಳ ಅಂಗಳಗಳಲ್ಲಿ ಆಹಾರ ಕೊಡದಂತೆ ಮಾಲಕರು ಕ್ರಮವಹಿಸಬೇಕು. ದೊಡ್ಡ ತಳಿ ನಾಯಿಗಳಾದ ರಾಟ್‍ವೀಲರ್, ಜರ್ಮನ್ ಷಫರ್, ಪಿಜ್ಬುಲ್, ಡಾಬರ್‍ಮನ್, ಗ್ರೇಟ್‍ಡೇನ್ ಸೇರಿದಂತೆ ಇನ್ನಿತರೆ ತಳಿಯ ನಾಯಿಗಳನ್ನು ಪ್ರವೇಶಿಸಲು ನಿಬರ್ಂಧಿಸಬೇಕು ಎಂದು ಬಿಬಿಎಂಪಿ ಸೂಚಿಸಿದೆ.







