ಖಾತೆ ಹಂಚಿಕೆ ಬೇಗುದಿ: ಬಿ.ಎಸ್ ಯಡಿಯೂರಪ್ಪರನ್ನು ಭೇಟಿಯಾದ ಸಚಿವ ಆನಂದ್ ಸಿಂಗ್
ಅಸಮಾಧಾನ ಶಮನಕ್ಕೆ ಅಖಾಡಕ್ಕಿಳಿದ ಮಾಜಿ ಸಿಎಂ ಬಿಎಸ್‍ವೈ

ಬೆಂಗಳೂರು, ಆ. 11: ಖಾತೆ ಹಂಚಿಕೆ ಬೆನ್ನಲ್ಲೆ ಭುಗಿಲೆದ್ದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದಲ್ಲಿನ ಸಚಿವರು ಹಾಗೂ ಶಾಸಕರ ಅಸಮಾಧಾನ ಶಮನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ ಇಳಿದಿದ್ದಾರೆ.
ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ನೀಡುವುದಕ್ಕೆ ತೀವ್ರ ಅಸಮಾಧಾನಗೊಂಡಿರುವ ಸಚಿವ ಆನಂದ್ ಸಿಂಗ್ ರಾಜೀನಾಮೆ ಮುಂದಾಗಿದ್ದಾರೆ. ಮಾತ್ರವಲ್ಲ, ನಿನ್ನೆಯಷ್ಟೇ ಹೊಸಪೇಟೆ(ವಿಜಯನಗರ)ಯಲ್ಲಿ ಶಾಸಕರ ಕಚೇರಿ ಬೋರ್ಡ್‍ಅನ್ನು ತೆರವುಗೊಳಿಸಿದ್ದು, ಪಕ್ಷದ ಮುಖಂಡರ ವಿರುದ್ಧ ಪರೋಕ್ಷ ಆಕ್ರೋಶ ಹೊರಹಾಕಿದ್ದರು.
ಇದರಿಂದ ವಿಚಲಿತರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ, ಆನಂದ್ ಸಿಂಗ್ ಅವರಿಗೆ ತಕ್ಷಣವೇ ಆಗಮಿಸುವಂತೆ ಸೂಚಿಸಿದರು. ಆ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಅವರನ್ನು ಯಡಿಯೂರಪ್ಪನವರ ನಿವಾಸ ಕಾವೇರಿಗೆ ಖುದ್ದು ಕರೆತಂದ ಶಾಸಕ ರಾಜುಗೌಡ ಸಮಾಲೋಚನೆ ನಡೆಸಿದ್ದಾರೆಂದು ಗೊತ್ತಾಗಿದೆ.
`ನಿಮ್ಮ ಆಶೀರ್ವಾದದಿಂದ ನಾನು ಮಂತ್ರಿಯಾದೆ. ವಿಜಯನಗರ ಸಾಮ್ರಾಜ್ಯದ ವೈಭವ ಉಳಿಸಲು, ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆ ಮಾಡಿ ಘೋಷಣೆ ಮಾಡಿದ್ದೀರ. ಆದರೆ ನಿಮ್ಮ ಅವಧಿಯಲ್ಲಿ ಎರಡು ಬಾರಿ ಸಚಿವ ಸ್ಥಾನ ಬದಲಾವಣೆ ಮಾಡಿದಿರಿ. ಆದರೂ, ನಾನು ನಿಮಗಾಗಿ ಏನೂ ಮಾತನಾಡಲಿಲ್ಲ. ಇದೀಗ ನನಗೆ ಅನ್ಯಾಯ ಆಗಿದೆ, ಉತ್ತಮ ಖಾತೆಯ ನಿರೀಕ್ಷೆಯಲ್ಲಿದ್ದ ನನಗೆ ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ನೀಡಿದ್ದಾರೆ. ಇದು ನನಗೆ ಬೇಸರ ತರಿಸಿದೆ. ಹೀಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಿಎಂ ಬೊಮ್ಮಾಯಿ ಬಳಿ ಹೇಳಿದ್ದೇನೆ, ಅವರು ಸ್ವಲ್ಪ ದಿನ ಕಾಯುವಂತೆ ತಿಳಿಸಿದ್ದಾರೆ' ಎಂದು ಆನಂದ್ ಸಿಂಗ್, ಬಿಎಸ್‍ವೈ ಮುಂದೆ ಹೇಳಿದರು.
ಕೊಟ್ಟಿರೋದನ್ನು ಮುಂದುವರಿಸು: `ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ನೀನು ಬಿಜೆಪಿ ಪಕ್ಷಕ್ಕೆ ಸೇರಿದ್ದೀಯ. ಸಚಿವ ಸ್ಥಾನ ಇಂದು ಇರುತ್ತೆ, ನಾಳೆ ಹೋಗುತ್ತೆ. ಅದಕ್ಕಾಗಿ ಹೀಗೆ ಮಾಡುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಇದೀಗ ಕೊಟ್ಟಿರುವ ಸ್ಥಾನವನ್ನು ಮುಂದುವರಿಸಿಕೊಂಡು ಹೋಗು. ನಿನಗೆ ಇನ್ನೂ ಭವಿಷ್ಯವಿದೆ. ಮುಂಬರುವ ದಿನಗಳಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ' ಎಂದು ಯಡಿಯೂರಪ್ಪ, ಆನಂದ್ ಸಿಂಗ್‍ಗೆ ಕಿವಿಮಾತು ಹೇಳಿದ್ದಾರೆಂದು ಗೊತ್ತಾಗಿದೆ.
ಈ ಮಧ್ಯೆ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಸಚಿವ ಆನಂದ್ ಸಿಂಗ್ ಅವರು ತಮ್ಮ ಸ್ಪಷ್ಟ ತೀರ್ಮಾನವನ್ನು ಸ್ಪಷ್ಟವಾಗಿ ತಿಳಿಸಿದ್ದು, ವರಿಷ್ಟರೊಂದಿಗೆ ಸಮಾಲೋಚನೆ ನಡೆಸಿ ನಿಮ್ಮ ಎಲ್ಲ ಸಮಸ್ಯೆ ಪರಿಹರಿಸುತ್ತೇವೆ. ಅಲ್ಲಿಯವರೆಗೂ ನೀವು ಶಾಂತವಾಗಿರಿ ಎಂದು ಸೂಚಿಸಿದ್ದಾರೆಂದು ಮೂಲಗಳು ತಿಳಿಸಿವೆ.
`ಖಾತೆ ಹಂಚಿಕೆ ಸಂಬಂಧ ಸಚಿವ ಆನಂದ್ ಸಿಂಗ್ ಅವರು ತಮ್ಮ ನೋವನ್ನು ಬಿಎಸ್‍ವೈ ಅವರ ಮುಂದೆ ಹೇಳಿಕೊಂಡಿದ್ದಾರೆ. ಆನಂದ್ ಸಿಂಗ್ ಅವರನ್ನು ಕರೆದುಕೊಂಡು ಬರಲು ಹೇಳಿದ್ದರು. ಹೀಗಾಗಿ ನಾನು ಅವರನ್ನು ಕರೆ ತಂದಿದ್ದೇನೆ. ಬಿಎಸ್‍ವೈ ಅವರು, ಸ್ವಲ್ಪ ಸಮಯಾವಕಾಶ ಕೊಡಿ ಸಮಸ್ಯೆ ಬಗೆಹರಿಸೋಣ ಎಂದು ತಿಳಿಸಿದ್ದಾರೆ. ಸಿಎಂ ಅವರನ್ನು ಆನಂದ್ ಸಿಂಗ್ ಭೇಟಿ ಮಾಡಲಿದ್ದು, ಮುಂದಿನ ನಿರ್ಧಾರ ಆನಂದ್ ಸಿಂಗ್ ಅವರಿಗೆ ಬಿಟ್ಟದ್ದು'
-ರಾಜೂಗೌಡ ಬಿಜೆಪಿ ಶಾಸಕ







