ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶಕ್ಕೆ ವಾರಾಂತ್ಯದ ನಿರ್ಬಂಧ

ಬೆಂಗಳೂರು, ಆ. 11: ಕೋವಿಡ್ ಮೂರನೇ ಅಲೆಯ ಭೀತಿ ಹಿನ್ನೆಲೆ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಮುಜರಾಯಿ ಇಲಾಖೆ ಹಾಗೂ ಖಾಸಗಿ ದೇವಾಲಯಗಳಲ್ಲಿ ಶ್ರಾವಣ ಮಾಸದ ವಾರಾಂತ್ಯ ದಿನಗಳು ಹಾಗೂ ಸಾರ್ವತ್ರಿಕ ರಜಾ ದಿನಗಳಲ್ಲಿ ಸಾರ್ವಜನಿಕರ ದೇವಾಲಯಗಳ ಪ್ರವೇಶಕ್ಕೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಕೋವಿಡ್ ನಿರ್ಬಂಧ ಸಡಿಸಿಲಿ ಜು.27ರಂದು ದೇವಸ್ಥಾನಗಳಲ್ಲಿ ನಿತ್ಯದ ಸೇವೆ, ಪೂಜೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಉತ್ಸವ, ಮೆರವಣಿಗೆ, ಧಾರ್ಮಿಕ ಸಭೆಗಳಿಗೆ ಮಾತ್ರ ನಿಷೇಧ ಹೇರಲಾಗಿತ್ತು. ಆ.9ರಿಂದ ಸೆ.7ರ ವರೆಗೆ ಶ್ರಾವಣ ಮಾಸದ ಹಿನ್ನೆಲೆ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಿದ್ದು, ಕೊರೋನ ಹರಡುವುದನ್ನು ತಪ್ಪಿಸಲು ಮೇಲ್ಕಂಡ ಆದೇಶ ಹೊರಡಿಸಲಾಗಿದೆ.
ಹೀಗಾಗಿ, ದೇವಾಲಯಗಳಲ್ಲಿ ದೈನಂದಿನ ಪೂಜೆ, ಸೇವೆ ಹೊರತುಪಡಿಸಿ ಶ್ರಾವಣ ಮಾಸದ ಶನಿವಾರ, ರವಿವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ಜಿಲ್ಲೆಯ ದೇವಸ್ಥಾನಗಳಿಗೆ ಭಕ್ತಾದಿಗಳಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ಜಿಲ್ಲಾಧಿಕಾರಿ ಕಟ್ಟಪ್ಪಣೆ ಹೊರಡಿಸಿದ್ದಾರೆ.





