ಬಿಬಿಎಂಪಿ ಕಟ್ಟಡ ನಿರ್ಮಿಸುವವರಿಂದ ಶುಲ್ಕ ಪಡೆಯುವ ಅಧಿಕಾರ ರದ್ದು: ಹೈಕೋರ್ಟ್

ಬೆಂಗಳೂರು, ಆ.11: ಕಟ್ಟಡ ನಿರ್ಮಾಣ ಮಾಡುವ ಸಾರ್ವಜನಿಕರಿಂದ ಹಲವು ಬಗೆಯ ಶುಲ್ಕಗಳನ್ನು ಪಡೆಯುವ ಅಧಿಕಾರ ಬಿಬಿಎಂಪಿಗೆ ಇಲ್ಲ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ. ಈ ಎಲ್ಲ ಶುಲ್ಕಗಳನ್ನು ರದ್ದು ಮಾಡಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಬಿಬಿಎಂಪಿಯ ಶುಲ್ಕ ಮತ್ತು ತೆರಿಗೆ ನೀತಿಯನ್ನು ಪ್ರಶ್ನಿಸಿದ್ದ ಸುಂದರ ಶೆಟ್ಟಿ ಮತ್ತು ಇತರರು ಸಲ್ಲಿಸಿದ್ದ ನೂರಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆ ನಡೆಸಿ ತೀರ್ಪು ನೀಡಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಕಟ್ಟಡ ನಿರ್ಮಾಣ ಮಾಡುವ ಸಾರ್ಜನಿಕರಿಂದ ನೆಲ ಬಾಡಿಗೆ, ಪರವಾನಗಿ ಶುಲ್ಕ, ಕಟ್ಟಡ ನಿರ್ಮಾಣ ಪರವಾನಗಿ ಶುಲ್ಕ, ಪರಿಶೀಲನಾ ಶುಲ್ಕ ಮತ್ತು ಭದ್ರತಾ ಠೇವಣಿಗಳನ್ನು ಪಡೆಯುವ ಅಧಿಕಾರ ಬಿಬಿಎಂಪಿಗೆ ಇಲ್ಲ ಎಂದು ತನ್ನ ತೀರ್ಪಿನಲ್ಲಿ ತಿಳಿಸಿದೆ.
ನಾಗರಿಕರಿಗೆ ಯಾವುದಾದರೂ ಸೇವೆ ನೀಡಿದಲ್ಲಿ ಮಾತ್ರವೇ ಅವರಿಂದ ಶುಲ್ಕ ಸಂಗ್ರಹಿಸಬಹುದು. ಇಲ್ಲವಾದರೆ, ನಾಗರಿಕರಿಂದ ಪಡೆಯುವ ಮೊತ್ತವು ತೆರಿಗೆಯ ವ್ಯಾಪ್ತಿಗೆ ಸೇರುತ್ತದೆ. ಈಗ ಕಟ್ಟಡ ಬೈಲಾ ಅಡಿಯಲ್ಲಿ ವಿಧಿಸುತ್ತಿರುವ ಶುಲ್ಕವನ್ನು ರಾಜ್ಯ ಸರಕಾರ ಅಥವಾ ಬಿಬಿಎಂಪಿ ಆಡಳಿತವು, ಸೂಕ್ತ ತಿದ್ದುಪಡಿಗಳೊಂದಿಗೆ ಕಾಯ್ದೆ ಮತ್ತು ನಿಯಮಗಳಿಗೆ ಅಡಿಯಲ್ಲಿ ತಂದರೆ ಮಾತ್ರ ಮುಂದುವರಿಸಬಹುದು ಎಂದು ನ್ಯಾಯಪೀಠ ಹೇಳಿದೆ.
ಶುಲ್ಕ ಮರುಪಾವತಿ: ನ್ಯಾಯಾಲಯದ ಮಧ್ಯಂತರದ ಆದೇಶದ ಅನುಸಾರ, ಶುಲ್ಕ ಪಾವತಿಸಿರುವ ಎಲ್ಲ ಅರ್ಜಿದಾರರಿಗೂ ಬಿಬಿಎಂಪಿ ಆ ಮೊತ್ತವನ್ನು ಮರುಪಾವತಿ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ. ಶುಲ್ಕ ಮರುಪಾವತಿಗೆ ಅರ್ಜಿದಾರರು ಮನವಿ ಸಲ್ಲಿಸಿದರೆ, 12 ವಾರಗಳಲ್ಲಿ ಅಗತ್ಯ ಆದೇಶಗಳನ್ನು ಹೊರಡಿಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ.







