ಮೀ ಟೂ ಪ್ರಕರಣ: ಎಂ.ಜೆ.ಅಕ್ಬರ್ ಮೇಲ್ಮನವಿ ಮೇಲೆ ಪ್ರಿಯಾ ರಮಣಿಗೆ ನೋಟಿಸ್ ಹೊರಡಿಸಿದ ದಿಲ್ಲಿ ಹೈಕೋರ್ಟ್

photo :PTI
ಹೊಸದಿಲ್ಲಿ,ಆ.11: ಮಾಜಿ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ಅವರು ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಪತ್ರಕರ್ತೆ ಪ್ರಿಯಾ ರಮಣಿ ಅವರಿಗೆ ದಿಲ್ಲಿ ಉಚ್ಚ ನ್ಯಾಯಾಲಯವು ಬುಧವಾರ ನೋಟಿಸನ್ನು ಹೊರಡಿಸಿದೆ. ತನ್ನ ಮೇಲೆ ಲೈಂಗಿಕ ಕಿರುಕುಳದ ಆರೋಪವನ್ನು ಹೊರಿಸಿದ್ದ ರಮಣಿ ವಿರುದ್ಧ 2018ರಲ್ಲಿ ತಾನು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಅವರನ್ನು ಖುಲಾಸೆಗೊಳಿಸಿರುವ ವಿಚಾರಣಾ ನ್ಯಾಯಾಲಯದ 2021,ಫೆ.17ರ ಆದೇಶವನ್ನು ಪ್ರಶ್ನಿಸಿ ಅಕ್ಬರ್ ಈ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ.
ಅಕ್ಬರ್ ಪರ ಹಿರಿಯ ವಕೀಲರಾದ ರಾಜೀವ ನಾಯರ್ ಮತ್ತು ಗೀತಾ ಲೂಥ್ರಾ ಅವರ ನಿವೇದನೆಗಳನ್ನು ಆಲಿಸಿದ ಬಳಿಕ ನ್ಯಾ.ಮುಕ್ತಾ ಗುಪ್ತಾ ಅವರು ಪ್ರಕರಣದ ವಿಚಾರಣೆಯನ್ನು ಜ.13ಕ್ಕೆ ನಿಗದಿಗೊಳಿಸಿದರು.
ಟ್ವೀಟ್ ಗಳು ಮತ್ತು ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟಗೊಂಡ ಲೇಖನಗಳ ಮೂಲಕ ರಮಣಿ ತನ್ನ ಪ್ರತಿಷ್ಠೆಗೆ ಹಾನಿಯನ್ನುಂಟು ಮಾಡಿದ್ದಾರೆ ಎಂದು ಅಕ್ಬರ್ ಮಾನನಷ್ಟ ಮೊಕದ್ದಮೆಯಲ್ಲಿ ಆರೋಪಿಸಿದ್ದರು. ಭಾರತದಲ್ಲಿ ಮೀ ಟೂ ಅಭಿಯಾನವು ಏರುಗತಿಯಲ್ಲಿದ್ದಾಗ ರಮಣಿ ಅಕ್ಬರ್ ವಿರುದ್ಧ ಲೈಂಗಿಕ ದುರ್ವರ್ತನೆ ಮತ್ತು ಕಿರುಕುಳದ ಆರೋಪಗಳನ್ನು ಮಾಡಿದ್ದರು.





