ಉದ್ಯಮಿ ಬಿ.ಎಂ. ಬಾಷಾ ಮನೆಗೆ ಮುತ್ತಿಗೆ: ವ್ಯಾಪಕ ಖಂಡನೆ; ಪೊಲೀಸರು ಸ್ವಯಂ ಪ್ರೇರಿತ ಕೇಸು ದಾಖಲಿಸಲು ಆಗ್ರಹ
ಮಂಗಳೂರು, ಆ.11: ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಉದ್ಯಮಿ ಬಿ.ಎಂ ಬಾಷಾ ಮನೆಗೆ ವಿಶ್ವಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ಮುತ್ತಿಗೆ ಹಾಕಿದ ಘಟನೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಈ ಬಗ್ಗೆ ಹಲವು ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಆರೋಪಿಗಳ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಕೇಸು ದಾಖಲಿಸಲು ಆಗ್ರಹಿಸಿವೆ.
ಯುನಿವೆಫ್ ಕರ್ನಾಟಕ: ಇತ್ತೀಚೆಗೆ ಎನ್‌ಐಎ ತನಿಖಾ ತಂಡ ಉಳ್ಳಾಲದ ಮನೆಯೊಂದಕ್ಕೆ ಭೇಟಿ ಕೆಲವು ಮಾಹಿತಿ ಸಂಗ್ರಹಿಸಿದ ಹಿನ್ನೆಲೆ ಯನ್ನಿಟ್ಟು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಸಂಘಟನೆಗಳು ಪ್ರತಿಭಟನೆಯ ಹೆಸರಲ್ಲಿ ನಿರ್ದಿಷ್ಟ ಮನೆಯ ಮುಂದೆ ಗೂಂಡಾಗಿರಿ ಪ್ರದರ್ಶಿಸಿರುವುದು ಅಕ್ಷಮ್ಯ. ಇದನ್ನು ಯುನಿವೆಫ್ ಕರ್ನಾಟಕ ತೀವ್ರವಾಗಿ ಖಂಡಿಸುತ್ತದೆ ಎಂದು ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ತಿಳಿಸಿದ್ದಾರೆ.
ಎನ್‌ಐಎ ತನಿಖಾ ತಂಡ ಜಿಲ್ಲೆಗೆ ಭೇಟಿ ನೀಡಿರುವುದು ಮತ್ತು ತನಿಖೆ ನಡೆಸಿರುವುದು ಇದೇ ಮೊದಲಲ್ಲ. ಇದಕ್ಕಿಂತ ಮುಂಚೆ ಗೌರಿ ಲಂಕೇಶ್ ಹತ್ಯೆಯಲ್ಲಿ ಸನಾತನ ಸಂಸ್ಥೆಯ ಭಯೋತ್ಪಾದಕರು ಭಾಗಿಗಳಾಗಿದ್ದಾರೆಂದು ಅವರ ಅನ್ವೇಷಣೆಯಲ್ಲಿ ಕೆಲವು ಮನೆಗಳಿಗೆ ದಾಳಿ ನಡೆಸಲಾಗಿತ್ತು. ಆಗ ಈ ಸ್ವಯಂಘೋಷಿತ ದೇಶಭಕ್ತರ ತಂಡ ಏಕೆ ಪ್ರತಿಭಟಿಸಲಿಲ್ಲ ಎಂದು ಯುನಿವೆಫ್ ಕರ್ನಾಟಕ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಪ್ರಶ್ನಿಸಿದ್ದಾರೆ.
ಸಮಾಜದಲ್ಲಿ ಗೊಂದಲವನ್ನು ಸೃಷ್ಟಿಸಲು ‘ಲವ್ ಜಿಹಾದ್’ ಎಂಬ ಕಪೋಲಕಲ್ಪಿತ ಸಂಬಂಧವನ್ನು ಸ್ವತಃ ಸೃಷ್ಟಿಸಿ, ಆ ಮೂಲಕ ತಮ್ಮ ಅಪರಾಧಗಳನ್ನು ಮುಚ್ಚಿಸಲು ಹೆಣೆಯುವ ಹೊಸ ಪ್ರಯೋಗವಾಗಿದೆ ಈ ಪ್ರತಿಭಟನೆ ಎಂಬ ನಾಟಕ. ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ. ಅವರು ಸಮಾಜ ವಿದ್ರೋಹಿಗಳು. ಅವರನ್ನು ಮಟ್ಟ ಹಾಕಬೇಕೆಂದು ಮುಸ್ಲಿಮ್ ಸಮುದಾಯದ ವಿದ್ವಾಂಸರೂ, ನಾಯಕರೂ, ಮೇಧಾವಿಗಳೂ ದಶಕಗಳಿಂದ ಸರಕಾರವನ್ನು ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಮುಸ್ಲಿಮ್ ಸಮುದಾಯಕ್ಕೆ ಉಪದೇಶಿಸುವ ಬದಲು ತಮ್ಮನ್ನೇ ಈ ಸಂಘಟನೆಗಳು ಆತ್ಮಾವಲೋಕನ ನಡೆಸಲಿ ಎಂದು ತಾಕೀತು ಮಾಡಿದರು.
ಎನ್‌ಐಎ ದಾಳಿಯನ್ನು ನೆಪವಾಗಿಟ್ಟು ಕೇವಲ ಮುಸ್ಲಿಮರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದರ ಹಿಂದೆ ಸಾಮಾಜಿಕ ಕಾಳಜಿ ಅಥವಾ ದೇಶಪ್ರೇಮವೂ ಅಲ್ಲ. ಬದಲಾಗಿ ಇದರ ಹಿಂದೆ ಹಿಡನ್ ಅಜೆಂಡಾ ಇದೆ ಎಂದು ಯುನಿವೆಫ್ ಕರ್ನಾಟಕ ಪ್ರತಿಪಾದಿಸುತ್ತದೆ. ಆಪಾದಿತರ ಮನೆಯ ಮುಂದೆ ಕಾನೂನಿನ ಮೇರೆಗಳನ್ನು ಮೀರಿ ಪ್ರತಿಭಟನೆಯ ನೆಪದಲ್ಲಿ ಗೂಂಡಾವರ್ತಿ ನಡೆಸಿರುವವರ ವಿರುದ್ಧ ಪ್ರಕರಣ ದಾಖಲಿಸಬೇಕು. ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಮಂಗಳೂರು ಪೊಲೀಸ್ ಆಯುಕ್ತರು ಕ್ರಮ ಕೈಗೊಳ್ಳಬೇಕು ಎಂದು ಯುನಿವೆಫ್ ಕರ್ನಾಟಕ ಆಗ್ರಹಿಸುತ್ತದೆ ಎಂದು ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ತಿಳಿಸಿದ್ದಾರೆ.
ಮಂಗಳೂರು ಸೆಂಟ್ರಲ್ ಕಮಿಟಿ: ಉಳ್ಳಾಲದಲ್ಲಿ ಸಂಘಪರಿವಾರದ ಕಾರ್ಯಕರ್ತರು ಪುಂಡಾಟಿಕೆ ಮಾಡಿರುವುದು ಖಂಡನೀಯ. ಏಕಾಏಕಿ ಮನೆಗೆ ನುಗ್ಗಲು ಯತ್ನಿಸುವ ಮೂಲಕ ಮಾಜಿ ಶಾಸಕರೊಬ್ಬರ ವ್ಯಕ್ತಿತ್ವಕ್ಕೆ ಮಸಿ ಬಳಿದ ಸಂಘಪರಿವಾರದ ನಾಯಕರು, ಕಾರ್ಯಕರ್ತರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಮಂಗಳೂರು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲಿ ಹಸನ್ ಒತ್ತಾಯಿಸಿದ್ದಾರೆ.







