ಸರಕಾರಿ ಜಾಹೀರಾತುಗಳಲ್ಲಿ ಜನಪ್ರತಿನಿಧಿ, ರಾಜಕೀಯ ಮುಖಂಡರ ಫೋಟೋ ಬಳಕೆ ನಿಷೇಧ ತೀರ್ಪು ಶ್ಲಾಘನೀಯ: ವೆಲ್ಫೇರ್ ಪಾರ್ಟಿ
ಮಂಗಳೂರು : ಪ್ರಜಾಸತ್ತಾತ್ಮಕವಾಗಿ ಸರಕಾರದ ಕರ್ತವ್ಯವಾಗಿರುವ ಸಾರ್ವಜನಿಕ ಸೇವಾ ಯೋಜನೆಗಳನ್ನು ಆರಂಭಿಸುವಾಗಲೇ ಆಡಳಿತರೂಢ ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕೆಲವು ಸ್ಥಳೀಯ ಜನಪ್ರತಿನಿಧಿಗಳು ತಮ್ಮ ವೈಯುಕ್ತಿಕ ಸಾಧನೆಯೆಂಬಂತೆ ಬೃಹತ್ ಪ್ಲೆಕ್ಸ್ ಗಳನ್ನು ನಿರ್ಮಿಸಿ ತಮ್ಮ ಫೋಟೋ ಹಾಕಿಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಸ್ಪರ್ಧಾತ್ಮಕವಾಗಿದ್ದು ಇವೆಲ್ಲವುಗಳಿಗೂ ಕಡಿವಾಣ ವೆಂಬಂತೆ, ಸರಕಾರಿ ಜಾಹೀರಾತುಗಳಲ್ಲಿ ಜನಪ್ರತಿನಿಧಿಗಳ ಮತ್ತು ರಾಜಕೀಯ ಮುಖಂಡರ ಫೋಟೋ ಬಳಕೆ ನಿಷೇಧದ ಸುಪ್ರೀಂ ಕೋರ್ಟಿನ ತೀರ್ಪು ಸ್ವಾಗತಾರ್ಹವಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಎಮ್. ಮುತ್ತಲಿಬ್ ಅವರು ಪ್ರಕಟಣೆಯಲ್ಲಿ ತಿಳಿಸಿದರು.
ಸರಕಾರವು ಕೈಗೊಳ್ಳುವ ಪ್ರತಿಯೊಂದು ಯೋಜನೆಗಳು ಸಹಜವಾಗಿಯೇ ಜನರು ಪಾವತಿಸಿದ ತೆರಿಗೆಯ ಹಣದಿಂದಲೇ ಆಗಿದ್ದು, ಎಲ್ಲಾ ಜನೋಪಯೋಗಿ ಸಾರ್ವಜನಿಕ ಕಾಮಗಾರಿಗಳನ್ನು ಮಾಡಿಕೊಡಬೇಕಾಗಿರುವುದು, ಚುನಾಯಿತ ಸರಕಾರದ ಹೊಣೆಯಾಗಿದೆ. ಆದರೆ ಇಂದಿನ ರಾಜಕೀಯ ರಂಗದಲ್ಲಿ ಮೌಲ್ಯಾಧಾರಿತ ಸಿದ್ಧಾಂತಗಳು ಮತ್ತು ಬದ್ಧತೆಗಳು ಕಣ್ಮರೆಯಾಗುತ್ತಿದೆ ಅದಕ್ಕೆ ಪೂರಕವಾಗಿ ಸರಕಾರದ ಜಾಹೀರಾತು ಗಳಲ್ಲಿ ವಿವಿಧ ಜನ ಪ್ರತಿನಿಧಿಗಳ ಬಗ್ಗೆ ಪ್ರಚಾರ ನೀಡುವ ಪರಿಪಾಠವೂ ಬೆಳೆದಿರುವುದು ದುರದೃಷ್ಟಕರ ಅದರಲ್ಲೂ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ, ಸರಕಾರವು ಯಾವುದೇ ಯೋಜನೆಗಳನ್ನು ಹಮ್ಮಿಕೊಂಡರೂ, ಅದು ಸಾರ್ವಜನಿಕ ರಸ್ತೆ, ದಾರಿದೀಪ, ಸರಕಾರಿ ಕಟ್ಟಡ, ಶೌಚಾಲಯವನ್ನೂ ಬಿಡದೆ, ಕೂಡಲೇ, ಮಂತ್ರಿ ಮಹೋದಯರುಗಳ ಭಾವಚಿತ್ರ ಮೇಲಿರಿಸಿ ಕೆಳಗೆ ಸ್ಥಳೀಯ ಜನಪತಿನಿಧಿಗಳ ಮಾತ್ರವಲ್ಲ ಶುಭಕೋರುವ ನೆಪದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಫೋಟೋ ಅಥವಾ ಹೆಸರುಗಳನ್ನು ಹೊಂದಿದ ಪ್ಲೆಕ್ಸ್, ಬ್ಯಾನರ್, ಕಟೌಟ್ ಜಾಹೀರಾತುಗಳ ಮೇಲಾಟವೇ ನಡೆಯುತ್ತದೆಯೆಂದು ಹೇಳಿದ ಅವರು ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಜಾರಿಗೆ ತರುವ ಸಲುವಾಗಿ ಇವೆಲ್ಲವುಗಳನ್ನು ತಕ್ಷಣ ತೆರವುಗೊಳಿಸುವಂತೆ ರಾಜ್ಯ ಸರಕಾರಕ್ಕೆ ಉಚ್ಚ ನ್ಯಾಯಾಲಯವು ಸೂಚನೆ ನೀಡಿದೆ ಹಾಗಿದ್ದೂ ಇನ್ನೂ ಸ್ಥಳೀಯಾಡಳಿತ ಇದರ ಕಾರ್ಯಾಚರಣೆಯನ್ನು ಆರಂಭಿಸದೆ ಇರುವುದರ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ ಅಥವಾ ತಕ್ಷಣ ಕಾರ್ಯ ಪ್ರವೃತ್ತವಾಗಬೇಕಾಗಿದೆಯೆಂದವರು ಇದೇ ಸಂದರ್ಭದಲ್ಲಿ ಹೇಳಿದರು.







