ಬೇಹುಗಾರಿಕೆ ಆರೋಪ: ಕೆನಡ ಉದ್ಯಮಿಗೆ 11 ವರ್ಷ ಜೈಲು ಶಿಕ್ಷೆ ವಿಧಿಸಿದ ಚೀನಾ ಕೋರ್ಟ್
ಟೊರಾಂಟೊ, ಆ.11: ಬೇಹುಗಾರಿಕೆಯ ಆರೋಪದಲ್ಲಿ ಚೀನಾದ ನ್ಯಾಯಾಲಯ ವೊಂದು ಕೆನಡದ ಉದ್ಯಮಿ ಮೈಕೆಲ್ ಸ್ಪೆವೊರ್ ಅವರನ್ನು ದೋಷಿಯೆಂದು ಪರಿಗಣಿಸಿ ತೀರ್ಪು ನೀಡಿದ್ದು, ಅವರಿಗೆ 11 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
2018ರಲ್ಲಿ ಮೈಕೆಲ್ ಸ್ಪೆವೊರ್ ಅವರನ್ನು ಕೆನಡದ ಮಾಜಿ ರಾಜತಾಂತ್ರಿಕ ಮೈಕೆಲ್ ಕೊವ್ರಿಗ್ ಜೊತೆ ಚೀನಾ ಬಂಧಿಸಿತ್ತು. ಚೀನಾ ನ್ಯಾಯಾಲಯದ ಇಂದಿನ ತೀರ್ಪಿನಿಂದಾಗಿ ಕೆನಡ ಹಾಗೂ ಚೀನಿ ಸರಕಾರಗಳ ನಡುವೆ ಬಾಂಧವ್ಯ ಇನ್ನಷ್ಟು ಹದಗೆಡುವ ಸಾಧ್ಯತೆಯಿದೆಯೆಂದು ಅಂತಾರಾಷ್ಟ್ರೀಯ ವಿಶ್ಲೇಷಕರು ಬಣ್ಣಿಸಿದ್ದಾರೆ.
ಚೀನಾದ ಬೃಹತ್ ತಂತ್ರಜ್ಞಾನ ಉದ್ಯಮಸಂಸ್ಥೆ ಹುವೈನ ಹಿರಿಯ ಕಾರ್ಯನಿ ರ್ವಹಣಾಧಿಕಾರಿ ಮೆಂಗ್ ವಾಂಝೌ ಅವರ ಗಡಿಪಾರಿಗೆ ಚೀನಾ ಆಡಳಿತವು ಕೆನಡದ ಮೇಲೆ ಒತ್ತಡ ಹೇರುತ್ತಿರುವ ನಡುವೆಯೇ, ಚೀನಾದ ನ್ಯಾಯಾಲಯ ಈ ತೀರ್ಪನ್ನು ನೀಡಿದೆ.
ಬೇಹುಗಾರಿಕೆ ಹಾಗೂ ದೇಶದ ರಹಸ್ಯಗಳನ್ನು ಕಾನೂನುಬಾಹಿರವಾಗಿ ವಿದೇಶಕ್ಕೆ ಒದಗಿಸಿದ ಅಪರಾಧಕ್ಕಾಗಿ ಸ್ಪೆವೊರ್ಗೆ 11 ವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸಲಾಗಿದೆ ಹಾಗೂ 50 ಸಾವಿರ ಯುವಾನ್ (5,73,793 ರೂ. ) ವೌಲ್ಯದ ವೈಯಕ್ತಿಕ ಆಸ್ತಿಯನ್ನು ವಶಪಡಿಸಿಕೊಳಬೇಕು ಹಾಗೂ ಗಡಿಪಾರುಗೊಳಿಸಬೇಕೆಂದು ಡಾಂಡೊಂಗ್ನ ನ್ಯಾಯಾಲಯವು ತೀರ್ಪಿನಲ್ಲಿ ಘೋಷಿಸಿದೆ.
ಆದರೆ ತೀರ್ಪಿನಲ್ಲಿ ಸ್ಪೆವೊರ್ ಅವರನ್ನು ಯಾವಾಗ ಗಡಿಪಾರುಗೊಳಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿಲ್ಲ. ಆದರೆ ಚೀನಾದಲ್ಲಿ ಸಾಮಾನ್ಯವಾಗಿ ಅಪರಾಧಿಗಳು ಶಿಕ್ಷೆಯನ್ನು ಪೂರ್ಣಗೊಳಿಸಿದ ಬಳಿಕ ಅವರನ್ನು ಗಡಿಪಾರುಗೊಳಿಸಲಾಗುತ್ತಿದೆ.
ಸ್ಪೆವೊರ್ ಹಾಗೂ ಕೊವ್ರಿಗ್ ಇಬ್ಬರೂ ರಾಜಕೀಯ ಚೌಕಾಶಿಯ ದಾಳಗಳನ್ನಾಗಿ ಚೀನಾ ಬಳಸಿಕೊಳ್ಳುತ್ತಿದೆಯೆಂದು ಬೀಜಿಂಗ್ ನ ಟೀಕಾಕಾರರು ಆರೋಪಿಸಿದ್ದು, ಇದು ಒತ್ತೆಯಾಳು ರಾಜತಾಂತ್ರಿಕತೆಯ ಒಂದು ಭಾಗವಾಗಿದೆ ಎಂದವರು ಹೇಳಿದ್ದರು.
ಚೀನಾ ನ್ಯಾಯಾಲಯದ ತೀರ್ಪನ್ನು ಕೆನಡ ಪ್ರಧಾನಿ ಜಸ್ಟಿನ್ ಟ್ರೆಡೊವ್ ಖಂಡಿಸಿದ್ದು, ಸ್ಪೆವೊರ್ ಅವರನ್ನು ಅಪರಾಧಿಯೆಂದು ಪರಿಗಣಿಸಿರುವುದು ಸಂಪೂರ್ಣವಾಗಿ ಅಸ್ವೀಕಾರಾರ್ಹ ಹಾಗೂ ಅನ್ಯಾಯದಿಂದ ಕೂಡಿದ್ದಾಗಿದೆ ಎಂದು ಹೇಳಿದ್ದಾರೆ.







