ಗೋಣಿಬೀಡು: ಬಂದೂಕಿನಿಂದ ಗುಂಡು ಹಾರಿಸಿ ಮಗನ ಹತ್ಯೆ

ಕಿರಣ್
ಚಿಕ್ಕಮಗಳೂರು, ಆ.11: ಹೆತ್ತ ತಂದೆಯೇ ಮಗನನ್ನೂ ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಗೈದಿರುವ ಘಟನೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಗ್ರಾಮದಲ್ಲಿ ಬುಧವಾರ ರಾತ್ರಿ ವರದಿಯಾಗಿದೆ.
ಕಿರಣ್(32) ತಂದೆಯಿಂದಲೇ ಗುಂಡೇಟಿನಿಂದ ಹತ್ಯೆಯಾದ ಯುವಕನಾಗಿದ್ದು, ಆರೋಪಿಯಾಗಿರುವ ಲಕ್ಷ್ಮಣ್ನನ್ನು ಪೊಲೀಸರು ಬಂಧಿಸಿದ್ದಾರೆ.
ಬುಧವಾರ ರಾತ್ರಿ ಘಟನೆ ನಡೆದಿದ್ದು, ಮೂಡಿಗೆರೆ ತಾಲೂಕು ವ್ಯಾಪ್ತಿಯ ಗೋಣಿಬೀಡು ಗ್ರಾಮದ ವಾಸಿಯಾಗಿರುವ ಲಕ್ಷ್ಮಣ್ ಹಾಗೂ ಅವರ ಮಗ ಕಿರಣ್ ಇಬ್ಬರೇ ಮನೆಯಲಿದ್ದ ವೇಳೆ ಅಪ್ಪ ಹಾಗೂ ಮಗನ ನಡುವೆ ಕ್ಷುಲ್ಲಕ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದ್ದು, ಇದರಿಂದ ಕುಪಿತನಾದ ತಂದೆ ಲಕ್ಷ್ಮಣ್ ತನ್ನ ಮನೆಯಲ್ಲಿದ್ದ ಬಂದೂಕಿನಿಂದ ಮನೆಯ ಒಳಗಿದ್ದ ಮಗ ಕಿರಣ್ ಮೇಲೆ ಗುಂಡು ಹಾರಿಸಿದ್ದಾನೆಂದು ತಿಳಿದು ಬಂದಿದೆ.
ಬಂದೂಕಿನ ಗುಂಡು ಕಿರಣ್ ಎದೆ ಹಾಗೂ ತಲೆಗೆ ಬಿದ್ದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ. ಕಿರಣ್ ಅವರ ತಾಯಿ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದು, ಅವರು ಮಗಳ ಮನೆಯಲ್ಲಿದ್ದಾರೆ. ಗೋಣಿಬೀಡು ಗ್ರಾಮದಲ್ಲಿ ತಂದೆ ಲಕ್ಷ್ಮಣ್ ಹಾಗೂ ಮಗ ಕಿರಣ್ ಇಬ್ಬರೇ ವಾಸವಿದ್ದರು. ಲಕ್ಷ್ಮಣ್ 5 ಎಕರೆ ಜಮೀನು ಹೊಂದಿದ್ದು, ಈ ಜಮೀನಿನಲ್ಲಿ ಲಕ್ಷ್ಮಣ್ ಮಗ ಕಿರಣ್ ಕಷ್ಟಪಟ್ಟು ಕೃಷಿ ಮಾಡಿದ್ದ ಎಂದು ತಿಳಿದು ಬಂದಿದ್ದು, ಮಾನಸಿಕ ಖಿನ್ನತೆಯಿಂದ ಕ್ಷುಲ್ಲಕ ಕಾರಣಕ್ಕೆ ಲಕ್ಷ್ಮಣ್ ಬಂದೂಕಿನಿಂದ ತಾನು ಹೆತ್ತ ಮಗನ ಮೇಲೆಯೇ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.
ಘಟನೆ ಸಂಬಂಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.







