ಆದ್ಯತಾ ವಲಯಗಳ ಅಭಿವೃದ್ಧಿಗೆ 3.5 ಟ್ರಿಲಿಯನ್ ಡಾಲರ್ ವ್ಯಯಿಸುವ ಯೋಜನೆಗೆ ಅಮೆರಿಕ ಸಂಸತ್ ಅಸ್ತು
ವಾಶಿಂಗ್ಟನ್,ಆ.11: ಉನ್ನತ ಆದ್ಯತಾ ಕ್ಷೇತ್ರಗಳಿಗೆ 3.5 ಟ್ರಿಲಿಯನ್ ಡಾಲರ್ ವ್ಯಯಿಸುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ತಯಾರಿಸಿರುವ ನೀಲನಕ್ಷೆಗೆ ಅಮೆರಿಕ ಸೆನೆಟ್ ಬುಧವಾರ 50-49 ಮತಗಳ ಅಂತರದಿಂದ ಅನುಮೋದನೆ ನೀಡಿದೆ. ಹವಾಮಾನ ಬದಲಾವಣೆ ಹಾಗೂ ಬಡತನದ ವಿರುದ್ಧ ಹೋರಾಡಲು ಅಗಾಧ ವೆಚ್ಚದ ಬಗ್ಗೆ ಸಂಸದರಲ್ಲಿ ಪರ-ವಿರೋಧ ಚರ್ಚೆಗಳ ಬಳಿಕ ನೀಲನಕ್ಷೆಯನ್ನು ಅಂಗೀಕರಿಸಲಾಗಿದೆ.
ಹಲವು ತಿಂಗಳುಗಳ ಬಿಕ್ಕಟ್ಟಿನ ಬಳಿಕ ಅಮೆರಿಕ ಸೆನೆಟ್ ಮಂಗಳವಾರ 1 ಟ್ರಿಲಿಯನ್ ಡಾಲರ್ ಮೊತ್ತದ ಮೂಲಸೌಕರ್ಯ ವಿಧೇಯಕವನ್ನು 69-30 ಮತಗಳಿಂದ ಅಂಗೀಕರಿಸಿತ್ತು. ರಸ್ತೆಗಳು,ಶಿಶು ಶಿಕ್ಷಣ, ಯೋಗ್ಯದರದ ವಸತಿ ಹಾಗೂ ಹವಾಮಾನ ಸ್ನೇಹಿ ತಂತ್ರಜ್ಞಾನದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ದಶಕದಲ್ಲಿಯೇ ಅತ್ಯಧಿಕ ಮೊತ್ತದ ಹೂಡಿಕೆಗೆ ಅನುಮೋದನೆ ದೊರೆತಿದೆ.
ವರ್ಷಕ್ಕೆ 4 ಲಕ್ಷ ಡಾಲರ್ ಗಿಂತ ಕಡಿಮೆ ವರಮಾನದ ಜನತೆಗೆ ಆದಾಯ ತೆರಿಗೆ ಹೆಚ್ಚಳವನ್ನು ತಡೆಯಲು ಸಾಧ್ಯವಾಗುವಂತಹ ತೆರಿಗೆ ಹೆಚ್ಚಳವನ್ನು ತಡೆಯುವ ಹಾಗೂ ಗರ್ಭಪಾತಕ್ಕೆ ಅರ್ಥಿಕ ನೆರವು ನಿಷೇಧ ಸೇರಿದಂತೆ 50 ತಿದ್ದುಪಡಿ ವಿಧೇಯಕಗಳಿಗೆ ಸೆನೆಟ್ ಸದಸ್ಯರು ಮತ ಚಲಾಯಿಸಿದ್ದಾರೆ.





