ಪ್ರಜಾಪ್ರಭುತ್ವದ ಕಗ್ಗೊಲೆ: ಸಂಸತ್ ಅಧಿವೇಶನದ ಹಠಾತ್ ಅಂತ್ಯ ಕುರಿತು ರಾಹುಲ್ ಪ್ರತಿಕ್ರಿಯೆ

ಹೊಸದಿಲ್ಲಿ: ಸಂಸತ್ತಿನ ಮಳೆಗಾಲದ ಅಧಿವೇಶನವನ್ನು ಅರ್ಧದಲ್ಲಿಯೇ ಹಠಾತ್ ಆಗಿ ಮುಕ್ತಾಯಗೊಳಿಸಿದ್ದನ್ನು ಹಾಗೂ ಬುಧವಾರ ರಾಜ್ಯಸಭೆಯ ಮಹಿಳಾ ಸದಸ್ಯರ ಮೇಲೆ ನಡೆದಿದೆಯೆನ್ನಲಾದ ಹಲ್ಲೆಯನ್ನು ಖಂಡಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹಾಗೂ ಇತರ ವಿಪಕ್ಷ ನಾಯಕರು ಇಂದು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.
"ನಮಗೆ ಸಂಸತ್ತಿನಲ್ಲಿ ಮಾತನಾಡಲು ಅನುಮತಿಸದೇ ಇರುವುದರಿಂದ ಇಂದು ನಾವು ನಿಮ್ಮೊಂದಿಗೆ (ಮಾಧ್ಯಮ) ಮಾತನಾಡಲು ಬಂದಿದ್ದೇವೆ, ಇದು ಪ್ರಜಾಪ್ರಭುತ್ವದ ಕಗ್ಗೊಲೆ" ಎಂದು ರಾಹುಲ್ ಗಾಂಧಿ ಹೇಳಿದರು.
"ಸಂಸತ್ ಅಧಿವೇಶನವನ್ನು ಅಂತ್ಯಗೊಳಿಸಲಾಗಿದೆ. ದೇಶದ ಶೇ60ರಷ್ಟು ಭಾಗದ ದನಿಯನ್ನು ಅಮುಕಲಾಗಿದೆ, ಅವಮಾನಿಸಲಾಗಿದೆ ಹಾಗೂ ನಿನ್ನೆ ರಾಜ್ಯಸಭೆಯಲ್ಲಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ" ಎಂದು ಅವರು ಹೇಳಿದರು.
"ಶಿವಸೇನೆ ಸಂಸದ ಸಂಜಯ್ ರಾವತ್ ಮಾತನಾಡಿ, ಮಹಿಳೆಯರು ಸೇರಿದಂತೆ ಸಂಸದರ ಮೇಲೆ ದೈಹಿಕ ಹಲ್ಲೆ ನೋಡಿ ನಾವು ಪಾಕಿಸ್ತಾನದ ಗಡಿಯಲ್ಲಿರುವಂತೆ ಭಾಸವಾಯಿತು. ವಿಪಕ್ಷಕ್ಕೆ ತಮ್ಮ ಅಭಿಪ್ರಾಯಗಳನ್ನು ಸಂಸತ್ತಿನಲ್ಲಿ ವ್ಯಕ್ತಪಡಿಸಲು ಅವಕಾಶ ದೊರಕಿಲ್ಲ" ಎಂದು ಹೇಳಿದರು.
ಬುಧವಾರ ರಾಜ್ಯಸಭೆಯಲ್ಲಿ ವಿಮಾ ಮಸೂದೆಯೊಂದರ ತಿದ್ದುಪಡಿ ಅಂಗೀಕರಿಸುವ ವೇಳೆ ಭಾರೀ ಗೊಂದಲದ ವಾತಾವರಣ ಮೂಡಿತಲ್ಲದೆ ತಾವು ಸದನದ ಅಂಗಳದಲ್ಲಿ ಪ್ರತಿಭಟಿಸುತ್ತಿರುವ ವೇಳೆ ತಮ್ಮ ಮೇಲೆ ಪುರುಷ ಮಾರ್ಷಲ್‍ಗಳು ಹಲ್ಲೆ ನಡೆಸಿದ್ದಾರೆಂದು ಕಾಂಗ್ರೆಸ್‍ನ ಸಂಸದೆಯರು ಆರೋಪಿಸಿದ್ದರು.
ಈ ರೀತಿ ಮಹಿಳಾ ಸಹೋದ್ಯೋಗಿಗಳ ಮೇಲೆ ಹಲ್ಲೆ ನಡೆಸಿರುವುದು ತಮ್ಮ 55 ವರ್ಷಗಳ ಸಂಸದೀಯ ಅನುಭವದಲ್ಲಿ ಹಿಂದೆಂದೂ ನೋಡಿಲ್ಲ ಎಂದು ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ನಂತರ ಹೇಳಿದ್ದರು.
"ಈ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಲು ಸರಕಾರ ನಿರಾಕರಿಸಿತ್ತು, ಈ ಬೇಡಿಕೆಯನ್ನು ವಿಪಕ್ಷ ಸದಸ್ಯರು ಸೇರಿದಂತೆ ಬಿಜೆಪಿಗೆ ಹತ್ತಿರದ ಸಂಸದರೂ ಮುಂದಿಟ್ಟಿದ್ದರು, ಆದರೆ ಸಂಸತ್ತಿನಲ್ಲಿ ನಡೆದ ಘಟನೆ ಆಘಾತಕರ" ಎಂದು ಕಾಂಗ್ರೆಸ್ ಮುಖ್ಯ ಸಚೇತಕ ಜೈರಾಂ ರಮೇಶ್ ಹೇಳಿದರು.
#WATCH CCTV visuals of Opposition MPs jostling with marshals in Parliament yesterday pic.twitter.com/yfJsbCzrhl
— ANI (@ANI) August 12, 2021







